ಸುದ್ದಿ

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಮಾರ್ಗಸೂಚಿ ಹೊರಡಿಸಿದ ಸುಪ್ರೀಂಕೋರ್ಟ್

Share It

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ನಲ್ಲಿ ಸಂಭವಿಸುವ ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸಹಜ ಸಾವುಗಳ ಬಗ್ಗೆ ಕೂಡಲೇ ಪೊಲೀಸರಿಗೆ ವರದಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸಹಜ ಸಾವುಗಳ ಬಗ್ಗೆ ವಾರ್ಷಿಕ ವರದಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ವೃತ್ತಿಪರ ಕೋರ್ಸ್‌ಗಳ ಮೇಲ್ವಿಚಾರಣೆ ನಡೆಸುವ ಸಂಸ್ಥೆಗಳಿಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಮತ್ತು ಆ‌ರ್.ಮಹದೇವನ್‌ ಅವರನ್ನೊಳಗೊಂಡ ಪೀಠವು ಸೂಚಿಸಿದೆ. ಇದೇ ವೇಳೆ
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ, ಸೌಲಭ್ಯ, ಸುರಕ್ಷತೆ ಸೇರಿದಂತೆ ಮೂಲಭೂತ ಕರ್ತವ್ಯಗಳಿಂದ ಉನ್ನತ ಶಿಕ್ಷಣ ಸಂಸ್ಥೆಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ದೇಶಾದ್ಯಂತದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ, ಆರ್ ಮಹಾದೇವನ್ ಅವರಿದ್ದ ಪೀಠ ಹೊರಡಿಸಿರುವ ಮಾರ್ಗಸೂಚಿಗಳು

ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ಅಥವಾ ಅಸಹಜ ಸಾವು ಪ್ರಕರಣವನ್ನು ಕಡ್ಡಾಯವಾಗಿ ಪೊಲೀಸರಿಗೆ ವರದಿ ಮಾಡಬೇಕು. ಈ ನಿಯಮ ತರಗತಿ, ದೂರ ಶಿಕ್ಷಣ ಅಥವಾ ಆನ್‌ಲೈನ್ ಶಿಕ್ಷಣ ನೀಡುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.

ವಿದ್ಯಾರ್ಥಿಗಳಿಗೆ 24 ಗಂಟೆಗಳ ವೈದ್ಯಕೀಯ ಸೌಲಭ್ಯ ಒದಗಿಸುವುದು ಕಡ್ಡಾಯವಾಗಿದ್ದು, ತಕ್ಷಣದ ಚಿಕಿತ್ಸೆ ಲಭ್ಯವಾಗದಿರುವುದೇ ಅನೇಕ ಮಾನಸಿಕ ಸಂಕಷ್ಟಗಳು ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ತಿಳಿಸಲಾಗಿದೆ.

ಅಧ್ಯಾಪಕರ ಕೊರತೆ ಹಾಗೂ ನಾಯಕತ್ವ ಹುದ್ದೆಗಳ ಖಾಲಿತನ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಶೈಕ್ಷಣಿಕ ಒತ್ತಡ ಸೃಷ್ಟಿಸುತ್ತಿದೆ ಎಂದಿರುವ ಅದು ಎಲ್ಲಾ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ನಾಲ್ಕು ತಿಂಗಳೊಳಗೆ ಭರ್ತಿ ಮಾಡುವಂತೆ ಆದೇಶಿಸಿದೆ. ಭರ್ತಿ ಮಾಡುವಾಗ ಮೀಸಲಾತಿ ನಿಯಮ ಅನುಸರಿಸುವಂತೆ ಹೇಳಿದೆ.

ವಿದ್ಯಾರ್ಥಿವೇತನ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದ ವಿದ್ಯಾರ್ಥಿಗಳು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಬಾಕಿ ಇರುವ ಎಲ್ಲಾ ವಿದ್ಯಾರ್ಥಿವೇತನದ ಮೊತ್ತವನ್ನು ನಾಲ್ಕು ತಿಂಗಳೊಳಗೆ ವಿತರಿಸಬೇಕು ಹಾಗೂ ವಿಳಂಬದ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಅದು ಹೇಳಿದೆ.

ರಾಗಿಂಗ್, ಲೈಂಗಿಕ ಕಿರುಕುಳ ಮತ್ತು ದೂರು ಪರಿಹಾರ ವ್ಯವಸ್ಥೆಗಳ ಅನುಷ್ಠಾನದಲ್ಲಿನ ಲೋಪಗಳ ಕುರಿತು ಪೀಠ ಕಠಿಣ ಎಚ್ಚರಿಕೆ ನೀಡಿದ್ದು, ನಿರ್ದೇಶನಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳೊಂದಿಗೆ ಶಿಕ್ಷಣ ಸಂಸ್ಥೆಗಳು ತನ್ನ ಮಾರ್ಗಸೂಚಿಗಳನ್ನು ಸೇರ್ಪಡೆ ಮಾಡಿ ಸಾರ್ವತ್ರಿಕ ವಿದ್ಯಾರ್ಥಿ ಕಲ್ಯಾಣ ಮತ್ತು ಆತ್ಮಹತ್ಯೆ ತಡೆ ನಿಯಮ ರೂಪಿಸಬೇಕು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ನೆರವಿನ ಕೊರತೆ ಹಾಗೂ ನಿಯಂತ್ರಣ ವ್ಯವಸ್ಥೆಗಳಲ್ಲಿರುವ ನ್ಯೂನತೆಗೆ ಸಂಬಂಧಿಸಿದಂತೆ 2025ರ ಕಾರ್ಯಪಡೆ ವರದಿ ತಿಳಿಸಿದ್ದ ಹಿನ್ನೆಲೆಯುಲ್ಲಿ, ಸುಪ್ರೀಂ ಕೋರ್ಟ್ ಹೆಚ್ಚುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆಯನ್ನು ತಡೆಯಲೆಂದು ಮಾರ್ಗಸೂಚಿ ಪ್ರಕಟಿಸಿದೆ.


Share It

You cannot copy content of this page