ಬೆಂಗಳೂರು: ಪ್ರಖ್ಯಾತ ರಿಯಲ್ ಎಸ್ಟೇಟ್
ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ ರಾಯ್ ಅವರು ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಶೋಕ್ ನಗರ ಠಾಣಾ ವ್ಯಾಪ್ತಿಯ ರಿಚ್ ಮಂಡ್ ರಸ್ತೆಯ ಲ್ಯಾಂಗ್ ಫೋರ್ಡ್ ಟೌನ್‌ನಲ್ಲಿರುವ ತಮ್ಮದೇ ಕಚೇರಿಯಲ್ಲಿ ಇಂದು ಮಧ್ಯಾಹ್ನ 3.15ರ ಸುಮಾರಿಗೆ ತಮ್ಮ ಬಳಿ ಇದ್ದ ಪಿಸ್ತೂಲ್ ಮೂಲಕ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಕುಸಿದು ಬಿದ್ದಿದ್ದ ರಾಯ್ ಅವರನ್ನ ಕೂಡಲೇ ಹೆಚ್‌ಎಸ್‌ಎರ್ ಲೇಔಟ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೇರಳದ ಕೊಚ್ಚಿ ಮೂಲದ ಉದ್ಯಮಿ ಸಿ.ಜೆ ರಾಯ್ ಅವರು ಪತ್ನಿ ಲಿನಿ ರಾಯ್, ಮಕ್ಕಳಾದ ರೋಹಿತ್ ಹಾಗೂ ಲಿಯಾನೊಂದಿಗೆ ಹೊಸೂರು ರಸ್ತೆಯ ಆನೇಪಾಳ್ಯ ಬಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದರು. ರಿಯಲ್ ಎಸ್ಟೇಟ್‌ನಲ್ಲಿ ಉದ್ಯಮಿಯಾಗಿ ಸಾಕಷ್ಟು ಹಣ,ಆಸ್ತಿ ಸಂಪಾದಿಸಿದ್ದ
ರಾಯ್ ನೂರಾರು ಎಕರೆ ಪ್ರಾಜೆಕ್ಟ್‌ಗಳನ್ನು ಹೊಂದಿದ್ದರು.
ಇಂದು ಸುಮಾರು 10 ಮಂದಿ ಐಟಿ ಅಧಿಕಾರಿಗಳು ರಾಯ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಹಲವು ದಾಖಲಾತಿಗಳನ್ನ ರಾಯ್ ಅವರು ಒದಗಿಸಿದ್ದರು. ಹೆಚ್ಚುವರಿ ದಾಖಲಾತಿ ಕೇಳಿದ್ದರಿಂದ ಕಚೇರಿಯ ಮೊದಲ ಮಹಡಿಯ ಕೊಠಡಿಗೆ ತೆರಳಿದಾಗ ತಮ್ಮ ಬಳಿಯಿದ್ದ ಪರವಾನಗಿ ಹೊಂದಿದ್ದ ಪಿಸ್ತೂಲ್‌ನಿಂದ ಎದೆಗೆ ಒಂದು ಸುತ್ತು ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.