ನೆಲಮಂಗಲ: ಗ್ಯಾಸ್ ಗೀಸರ್ ಅವಘಡದಲ್ಲಿ ಪತಿ ಸಾವನ್ನಪ್ಪಿದ ಸುದ್ದಿ ಕೇಳಿ ಆಘಾತಗೊಂಡು ಪತ್ನಿಯು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನೆಲಮಂಗಲ ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ರಾಜು (48) ಹಾಗೂ ಮೀನಾ (42) ಮೃತ ದಂಪತಿಗಳೆಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಪತಿ ರಾಜು ಮನೆಯಲ್ಲಿ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಗೀಸರ್‌ನಲ್ಲಿ ಅನಿಲ ಸೋರಿಕೆ ಉಂಟಾಗಿದ್ದು ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಗಂಡನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನೆಗೆ ಬಂದ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಮೀನಾ ಅವರು, ಪತಿಯ ಅಗಲಿಕೆ ನೋವು ತಾಳಲಾರದೆ ಮನನೊಂದು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಕುರಿತು ನೆಲಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.