ಯಲಬುರ್ಗಾ: ಹೆರ್ ಕಟಿಂಗ್ ಮಾಡಿಸಲು ತೆರಳಿದ್ದ ಯುವಕ ದಲಿತ ಎಂಬ ಕಾರಣಕ್ಕಾಗಿ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೆ ಯುವಕನನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಅಮಾನುಷ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ (23) ಕೊಲೆಯಾದ ಯುವಕ. ಇದೇ ಗ್ರಾಮದ ಮುದುಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಕೊಲೆಯಾದ ಯುವಕ ಯಮನೂರಪ್ಪ ಶನಿವಾರ ಬೆಳಗ್ಗೆ ಮುದುಕಪ್ಪನ ಕ್ಷೌರದಂಗಡಿಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ ‘ನೀನು ಹರಿಜನ (ದಲಿತ) ನಿನಗೆ ಕ್ಷೌರ ಮಾಡುವುದಿಲ್ಲ’ ಎಂದು ಮುದುಕಪ್ಪ ಹೇಳಿದ್ದಾನೆ. ಯಾಕೆ ಕ್ಷೌರ ಮಾಡುವುದಿಲ್ಲ ಎಂದು ಯಮನೂರಪ್ಪ ಪ್ರಶ್ನಿಸಿದ್ದಾನೆ ಆಗ ಮಾತಿಗೆ ಮಾತು ಬೆಳೆದು, ಕ್ಷೌರದಂಗಡಿಯ ಮುದಕಪ್ಪ ಕತ್ತರಿಯಿಂದ ಯಮನೂರಪ್ಪನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.ಅಟ್ರಾಸಿಟಿ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.