ಸುದ್ದಿ

ಅತ್ಯಾಚಾರ ಎಸಗಿ, ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯ: ಆರೋಪಿಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್

Share It

ಬೆಂಗಳೂರು: ವಿವಾಹಿತ ಮಹಿಳೆಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ 33 ವರ್ಷದ ರಫೀಕ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ. ಎಸ್. ರಾಚಯ್ಯ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಮುಗ್ಧ ಮತ್ತು ಬಡ ಮಹಿಳೆಯರನ್ನು ಪ್ರೇರೇಪಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಕ್ರಮವು ಗಂಭೀರ ಬೆಳವಣಿಗೆಯಾಗಿದೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸಮಾಜದ ಮುಗ್ಧ ಮತ್ತು ಹಿಂದುಳಿದ ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲು ನ್ಯಾಯಾಲಯಗಳು ಜಾಗೃತವಾಗಿವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಮಹಿಳೆಯ ಆರೋಪವೇನು: ಪ್ರಕರಣದ ಆರೋಪಿ ರಫೀಕ್ ಲಾಲಸಾಬ್ ಬೇಪಾರಿ ಬೆಳಗಾವಿ ಜಿಲ್ಲೆ ಸವದತ್ತಿಯ ವಾಸಿಯಾಗಿದ್ದು, ಈತ ಸಂತ್ರಸ್ತೆಯನ್ನು ಪರಿಚಯಿಸಿಕೊಂಡು ಆಪ್ತನಾಗಿದ್ದ. ಸಂತ್ರಸ್ತೆಯ ಪತಿ ಚಿಲ್ಲರೆ ಅಂಗಡಿ ಹೊಂದಿದ್ದು, ಅದನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದರು. ಅತ್ತೆ ಮನೆಗೆ ಊಟಕ್ಕೆ ಹೋದ ಸಮಯದಲ್ಲಿ ಸಂತ್ರಸ್ತೆ ಮಹಿಳೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ಅಂಗಡಿಗೆ ಬರುತ್ತಿದ್ದ ರಫೀಕ್ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದ.

ಸಂತ್ರಸ್ತ ಮಹಿಳೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರೂ ಆಕೆಗೆ ಸೂಕ್ತ ಕೆಲಸ ಕೊಡಿಸುವ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡಿದ್ದ.
ಬಳಿಕ ಬೆಳಗಾವಿಗೆ ಕರೆದೊಯ್ದು ಮನೆಯೊಂದರಲ್ಲಿ ಆಕೆಯನ್ನು ಇರಿಸಿ ಆಗಾಗ್ಗೆ ಅತ್ಯಾಚಾರ ಎಸಗುತ್ತಿದ್ದ. ಜತೆಗೆ ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ. ಸಂತ್ರಸ್ತೆ ತಪ್ಪಿಸಿಕೊಳ್ಳದಂತೆ ನಿಗಾವಹಿಸಲು ಮಹಿಳೆಯೊಬ್ಬರನ್ನು ನಿಯೋಜಿಸಿದ್ದ. ಅಂತಿಮವಾಗಿ ಸಂತ್ರಸ್ತೆ ಕೂಡಿಟ್ಟಿದ್ದ ಮನೆಯಿಂದ ತಪ್ಪಿಸಿಕೊಂಡ ಹೊರ ಬಂದು ಪತಿಗೆ ವಿಚಾರ ತಿಳಿಸಿದೆನು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರಿದ್ದರು.

ದೂರಿನ ಮೇರೆಗೆ ಸವದತ್ತಿ ಠಾಣೆ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದರು. ಬಳಿಕ ಆರೋಪಿ ರಫೀಕ್ ಜಾಮೀನು ಕೋರಿ ಬೆಳಗಾವಿಯ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ.

ಮೂಲ:- LAW TIME


Share It

You cannot copy content of this page