ಮಂಗಳೂರು: ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಇಲ್ಲಿನ ಎಫ್‌ಟಿಎಸ್‌ಸಿ-2 ಪೋಕ್ಸೂ ವಿಶೇಷ ನ್ಯಾಯಾಲಯವು ಮರಣದಂಡನೆ ಹಾಗೂ ₹1.20 ಲಕ್ಷ ಮೊತ್ತದ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ಜಯ್ ಸಿಂಗ್ (21), ಮುಕೇಶ್ ಸಿಂಗ್ (20) ಮತ್ತು ಜಾರ್ಖಂಡ್ ರಾಜ್ಯದ ರಾಂಚಿಯ ಮನೀಷ್ ತಿರ್ಕಿ (33) ಮರಣ ದಂಡನೆಗೆ ಒಳಗಾದ ಅಪರಾಧಿಗಳು.
ಏನಿದು ಪ್ರಕರಣ; ತಿರುವೈಲು ಗ್ರಾಮದ ಪರಾರಿಯಲ್ಲಿರುವ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದ ಈ ಮೂವರು, ಇದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್‌ನ ದಂಪತಿಯ ಎಂಟು ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ನಡೆಸುವ ಸಂಚು ರೂಪಿಸಿದ್ದರು. ಫ್ಯಾಕ್ಟರಿಗೆ ರಜೆ ಇರುವ ದಿನ (2021 ನವೆಂಬರ್ 21), ಇತರ ಕೆಲಸಗಾರರು ಇಲ್ಲದ ಸಮಯ ನೋಡಿ, ಅಲ್ಲಿಯೇ ಆಟವಾಡಿಕೊಂಡಿದ್ದ ಬಾಲಕಿಗೆ ಸಿಹಿ ತಿನಿಸು ನೀಡಿ, ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಾಲಕಿ ಚೀರಾಟ ಯಾರಿಗೂ ಕೇಳಬಾರದೆಂದು ಮೊದಲ ಆರೋಪಿ ಜಯ್ ಸಿಂಗ್ ಬಾಲಕಿ ಕುತ್ತಿಗೆಯನ್ನು ಹಿಸುಕಿ ಸಾಯಿಸಿದ್ದನು.
ಈ ಸಂಬಂಧ ಬಾಲಕಿಯ ತಾಯಿ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಆಗಿನ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತರ ಪರ ಒಟ್ಟು 30 ಸಾಕ್ಷಿದಾರರ ವಿಚಾರಣೆ, 74 ದಾಖಲೆಗಳು, ವೈಜ್ಞಾನಿಕ ವರದಿಗಳನ್ನು ಸಲ್ಲಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಗುರುವಾರ ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಮಾಡಿದ್ದಾರೆ.