ಬೆಂಗಳೂರು: ಖಾತಾ ವರ್ಗಾವಣೆ ಮಾಡಲು ₹13,000 ಲಂಚ ಪಡೆಯುತ್ತಿದ್ದಾಗ ಗ್ರಾಮ ಪಂಚಾಯತಿ ಕಂದಾಯ ವಸೂಲಿಗಾರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ನಿವಾಸಿ ರಕ್ಷಾ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿದ್ದು, ಅದರ ಇ-ಖಾತಾ ವರ್ಗಾವಣೆ ಬಾಕಿ ಇತ್ತು. ಈ ಕೆಲಸಕ್ಕಾಗಿ ಕಂದಾಯ ವಸೂಲಿಗಾರ ಪ್ರದೀಪ್ ಎಂ.ಎಂ. ಅವರನ್ನು ಭೇಟಿ ಮಾಡಿದಾಗ ₹13,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದ ಲೋಕಾಯುಕ್ತ ಪೊಲೀಸರು ತಿಳಿಸಿದರು.
‘ಈ ಸಂಬಂಧ ರಕ್ಷಾ ಅವರು ದೂರು ನೀಡಿದ್ದರು. ತನಿಖಾಧಿಕಾರಿಗಳ ಮಾರ್ಗದರ್ಶನದಂತೆ ದೂರುದಾರರು ಮಂಗಳವಾರ, ಪ್ರದೀಪ್ ಅವರಿಗೆ ಕಚೇರಿ ಬಳಿಯಲ್ಲೇ ಲಂಚ ನೀಡಿದ್ದರು. ಆರೋಪಿ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆಸಿ ಬಂಧಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಜೆ.ರಮೇಶ್ ಅವರ ತಂಡವು ಕಾರ್ಯಾಚರಣೆ ನಡೆಸಿತ್ತು.