ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಎಟಿಎಂಗಳ ಮೂಲಕವೇ ವಿತ್ ಡ್ರಾ ಮಾಡಬಹುದು. ಈ ಸೇವೆಯು 2025ರ ಶುರುವಿನಿಂದ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಬುಧವಾರ ಹೇಳಿದ್ದಾರೆ.
ಸಿಐಐ ಜಾಗತಿಕ ಆರ್ಥಿಕ ನೀತಿ ವೇದಿಕೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಇಪಿಎಫ್ಒಗೆ ಈಗ 7 ಕೋಟಿ ಸದಸ್ಯರಿದ್ದಾರೆ. ಕ್ಲೇಮ್ ಪ್ರೊಸೆಸಿಂಗ್ ಗೆ ವೇಗ ನೀಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಸುಲಭಗೊಳಿಸಲಾಗುತ್ತಿದ್ದು, ಮುಂದೆ ಗಮನಾರ್ಹ ಸುಧಾರಣೆ ಕಂಡುಬರಲಿದೆ ಎಂದು ತಿಳಿಸಿದರು.
ಗಿಗ್ ವರ್ಕರ್ ಗಳ ವಿಷಯದಲ್ಲಿ ಉದ್ಯೋಗಿ-ಉದ್ಯೋಗದಾತ ಎಂಬ ಸಾಂಪ್ರದಾಯಿಕ ಸಂಬಂಧ ಇರುವುದಿಲ್ಲ.ಆದರೆ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. 2030ರ ವೇಳೆಗೆ ಗಿಗ್ ಮತ್ತು ಪ್ಲಾಟ್ ಫಾರ್ಮ್ ಆರ್ಥಿಕತೆಯಲ್ಲಿ 3 ಕೋಟಿಗೂ ಹೆಚ್ಚು ಕೆಲಸಗಾರರು ಇರಲಿದ್ದಾರೆ ಎಂದು ಹೇಳಿದರು.