ಬೆಳಗಾವಿ:(ಸುವರ್ಣ ವಿಧಾನಸೌಧ): ಬೆಂಗಳೂರಿನಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ 4 ಸಂಭಾವ್ಯ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಜೆಡಿಎಸ್ ನ ಟಿ.ಎನ್.ಜವರಾಯಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು 2ನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಸ್ಥಳ ನಿಗದಿಯಾದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆ ಮಾಡಲಾಗುವುದು. ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆಯ ಕುರಿತು ಅಧ್ಯಯನ ನಡೆಸಿ ವರದಿ ನೀಡುವ ಕಾರ್ಯವನ್ನು ಐಡೆಕ್ ಸಂಸ್ಥೆಗೆ ವಹಿಸಲಾಗಿದೆ. ಪ್ರಮುಖವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಗುಡ್ಡಗಾಡು ಪ್ರದೇಶ, ಎತ್ರದ ರಚನೆಗಳು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ, ರೈಲು ಮತ್ತು ಮೆಟ್ರೋ ಸಂಪರ್ಕ, ವಿಸ್ತಾರವಾದ ಭೂ ಪ್ರದೇಶ, ಜಮೀನಿನ ಪ್ರಕಾರ,ಕಡಿಮೆ ಜನಸಾಂದ್ರತೆಯ ಪ್ರದೇಶ ಮತ್ತು ಜಲಸಂಪನ್ಮೂಲದ ಲಭ್ಯತೆ ಕುರಿತಂತೆ ಅಧ್ಯಯನ ನಡೆಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.