ಬೆಳಗಾವಿ: ಸದನದೊಳಗೆ ಪರಿಷತ್ ಸದಸ್ಯ ಸಿ.ಟಿ.ರವಿ ಅಸಂವಿಧಾನಿಕ ಪದ ಬಳಕೆ ಪ್ರಕರಣ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಬಿಜೆಪಿಯಲ್ಲಿ ಇರುವವರೆಲ್ಲರೂ ಧೃತರಾಷ್ಟ್ರರೇ ಆಗಿದ್ದಾರೆ. ಈ ಘಟನೆ ಬಗ್ಗೆ ಒಬ್ಬರೂ ಕ್ಷಮೆ ಕೋರುತ್ತಿಲ್ಲ ಎಂದು ಹರಿಹಾಯ್ದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಿಟಿ ರವಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
“ಸಿಟಿ ರವಿಯವರೇ ನನಗೆ ಆ ಪದ ಬಳಸಿದ್ದೀರಿ. ಇಂತಹ ನೂರು ಸಿಟಿ ರವಿ ಬಂದರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ. ನಾನು ಇಂದೇ ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದರು.
ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಳರ್, ಯಾವುದೇ ಕಾರಣಕ್ಕೂ ಸಿಟಿ ರವಿ ಅವರನ್ನು ಕ್ಷಮಿಸುವ ಪ್ರಮೇಯ ಇಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ಹೇಳಿದರು.
ಇನ್ನೂ ಈ ಪ್ರಕರಣವನ್ನು ಇಷ್ಟಕ್ಕೆ ಬಿಡುವುದಿಲ್ಲ. ಕಾನೂನು ಹೋರಾಟ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯವರನ್ನು ಭೇಟಿ ಆಗುತ್ತೇನೆ.
ಇಡೀ ಬಿಜೆಪಿಯಲ್ಲಿರುವವರೆಲ್ಲ ಧೃತರಾಷ್ಟ್ರರೇ.
ದೇಶದ ಜನರ ಎದುರು ಸದನದ ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವನ್ನು ಸಿಟಿ ರವಿ ಮಾಡಿದ್ದಾರೆ. ಇಡೀ ಮಹಿಳಾ ಕುಲದ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದರು ಆಕ್ರೋಶ ವ್ಯಕ್ತಪಡಿಸಿದರು.