ಸುದ್ದಿ

ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿಗೆ ಹಕ್ಕಿದೆ: ಹೈಕೋರ್ಟ್

Share It

ಬೆಂಗಳೂರು: ಹಿಂದೂ ಉತ್ತರಾಧಿಕಾರಿ ಕಾಯಿದೆ ಅಡಿ ಮೃತ ಪುತ್ರನ ಆಸ್ತಿಗೆ ತಾಯಿಯು ಮುಖ್ಯ ವಾರಸುದಾರಳಾಗಿದ್ದು, ಪತಿ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಲು ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ಮಾಡಿದೆ.

ಮೃತಪಟ್ಟಿರುವ ಪುತ್ರ ಸಂತೋಷ್ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಟಿ ಎನ್ ಸುಶೀಲಮ್ಮ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಸಂತೋಷ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮುಖ್ಯ ವಾರಸುದಾರರಾಗಲಿದ್ದಾರೆ. ಹೀಗಾಗಿ, ಸಂತೋಷ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರಾಗಲಿದ್ದು, ಮೊದಲ ಮೇಲ್ಮನವಿ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ವಾಸ್ತವಿಕ ಅಂಶಗಳು ಮತ್ತು ಕಾನೂನಿನ ನಿಬಂಧನೆಗಳನ್ನು ಆಳವಾಗಿ ವಿಶ್ಲೇಷಿಸಿರುವ ಹೈಕೋರ್ಟ್,ಮೇಲ್ಮನವಿದಾರರಾದ “ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲನೇ ಮುಖ್ಯ ವಾರಸುದಾರರಾಗಿದ್ದು, ಅವರು ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುದಾರರಾಗಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಸುಶೀಲಮ್ಮ ಅವರು ನಿಧನರಾಗಿದ್ದು, ಪತಿ, ಪುತ್ರಿ ಮತ್ತು ಈಗಾಗಲೇ ಸಾವನ್ನಪ್ಪಿರುವ ಪುತ್ರನನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಿಳೆಯ ಉತ್ತರಾಧಿಕಾರ ನಿಯಮಗಳ ಬಗ್ಗೆ ಚರ್ಚಿಸುವ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 ಅನ್ನು ಅನ್ವಯಿಸಬೇಕಿದೆ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.


Share It

You cannot copy content of this page