ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ
ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ನಿಯಮಿತ ಜಾಮೀನು ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು. ಈ ಸಂಬಂಧ ಮೇಲ್ಮನವಿ ಸಲ್ಲಿಸಲು ಬೆಂಗಳೂರು ಪೊಲೀಸರಿಗೆ ಗೃಹ ಇಲಾಖೆ ಒಪ್ಪಿಗೆ ನೀಡಿದೆ.
ಡಿ.13ರಂದು ಹೈಕೋರ್ಟ್ ಏಕಸದಸ್ಯ ಪೀಠ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಏಳು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನಗರ ಪೊಲೀಸರು, ಗೃಹ ಇಲಾಖೆಗೆ ಕಳೆದ ವಾರ ಪತ್ರ ಬರೆದಿದ್ದರು.
ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಹಿರಿಯ ವಕೀಲ ಸಿದ್ದಾರ್ಥ್ ಲೂದ್ರಾ ಅವರನ್ನು ನೇಮಿಸಲಾಗಿದೆ. ಅನಿಲ್ ಸಿ. ನಿಶಾನಿ ಹಾಗೂ ಹೈಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜವಾಬ್ದಾರಿ ನೀಡಿ ಆದೇಶಿಸಲಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿರುವ ಕಡತಗಳನ್ನು ಈಗಾಗಲೇ ಗೃಹ ಇಲಾಖೆಯಿಂದ ಪೊಲೀಸರಿಗೆ ರವಾನಿಸಲಾಗಿದೆ. ಕನ್ನಡದಿಂದ ಇಂಗ್ಲಿಷ್‌ಗೆ ದೋಷಾರೋಪ ಪಟ್ಟಿ ಭಾಷಾಂತರ ಕೆಲಸವು ಪೂರ್ಣವಾಗಿದೆ. ಎರಡು ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಜೈಲಿನಲ್ಲಿದ್ದಾಗ ನಟ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ದರ್ಶನ್ ಪರ ವಕೀಲರು ವೈದ್ಯಕೀಯ ಚಿಕಿತ್ಸೆಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿತ್ತು. ನಂತರ, ದರ್ಶನ್, ಪವಿತ್ರಗೌಡ ಸೇರಿದಂತೆ 7 ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಲಭಿಸಿತ್ತು.