ಬೆಂಗಳೂರು: ನಗರದ ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಏಳು ಅಪರಾಧಿಗಳಿಗೆ ನಗರದ 72ನೇ ಸಿಸಿಎಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.
ರೇಖಾ ಕದಿರೇಶ್ ಅವರನ್ನು 2021ರ ಜೂನ್‌ನಲ್ಲಿ ಅವರ ಕಚೇರಿ ಎದುರೇ ಹತ್ಯೆ ಮಾಡಿ ಹಂತಕರು ಪರಾರಿ ಆಗಿದ್ದರು. ಪೀಟರ್(49), ಸೂರ್ಯ ಅಲಿಯಾಸ್ ಸೂರಜ್ (23), ಸ್ಟೀಫನ್ (24), ಪುರುಷೋತ್ತಮ (25), ಅಜಯ್ (24), ಅರುಣ್‌ಕುಮಾರ್ (39) ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ (36) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದ ಅಪರಾಧಿ ಮಾಲಾ (63) ವಿಚಾರಣೆ ವೇಳೆ ಮೃತಪಟ್ಟಿದ್ದರು.
ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು 2021ರ ಸೆಪ್ಟೆಂಬರ್‌ನಲ್ಲಿ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ 72ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಾಲಚಂದ್ರ ಎನ್.ಭಟ್ ಅವರು ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾದ ಕಾರಣ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಏಳು ಅಪರಾಧಿಗಳ ಪೈಕಿ ಮೂವರು ಷರತ್ತುಬದ್ಧ ಜಾಮೀನು ಪಡೆದು ಕಾರಾಗೃಹದಿಂದ ಬಿಡುಗಡೆ ಆಗಿದ್ದರು. ನಾಲ್ವರು ಜೈಲಿನಲ್ಲಿದ್ದರು.
ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಪ್ರತ್ಯೇಕವಾಗಿ ವಾಸವಿದ್ದ ರೇಖಾ ಅವರು ಪತಿ ಕುಟುಂಬವನ್ನು ರಾಜಕೀಯವಾಗಿ ಕಡೆಗಣಿಸಿದ್ದರು. ಇದು ಕದಿರೇಶ್ ಅಕ್ಕ ಮಾಲಾ ಹಾಗೂ ಸಂಬಂಧಿಕರನ್ನು ಕೆರಳಿಸಿತ್ತು’ ಎಂಬ ವಿಚಾರವನ್ನು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ಪ್ರಕರಣದ ಹಿನ್ನೆಲೆ: ರೇಖಾ ಕದಿರೇಶ್ ಮತ್ತು ಆಕೆಯ ಅತ್ತಿಗೆ ಮಾಲಾ ನಡುವೆ ಮನಸ್ತಾಪ ಉಂಟಾಗಿತ್ತು. 2021 ಜೂ.24ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಪಕ್ಷದ ಕಚೇರಿ ಬಳಿ ರೇಖಾ ಕದಿರೇಶ್ ಅವರ ಮೇಲೆ ಅಪರಾಧಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಕಾಟನ್ ಪೇಟೆ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಚಿದಾನಂದ ಮೂರ್ತಿ, ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಕೋಟ್೯ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಸತ್ಯವತಿ ವಾದ ಮಂಡಿಸಿದ್ದರು.