ಮಂಗಳೂರು: ತಂದೆಯೇ ತನ್ನ ಮೂವರು ಚಿಕ್ಕಮಕ್ಕಳನ್ನು ಬಾವಿಗೆ ತಳ್ಳಿ ಕೊಲೆಗೈದು, ಪತ್ನಿಯ ಹತ್ಯೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಆಲಿಯಾಸ್ ಹಿತೇಶ್ ಕುಮಾರ್(43) ಎಂಬಾತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
2022ರ ಜೂ.23ರಂದು ಸಾಯಂಕಾಲ ಆರೋಪಿ ಹಿತೇಶ್ ತನ್ನ ಮಕ್ಕಳಾದ ರಶ್ಮಿತಾ(14), ಉದಯ ಕುಮಾರ್ (11), ದಕ್ಷಿತ್(4)ರನ್ನು ಮನೆ ಬಳಿಯ ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಅದೇ ದಿನ ಸಂಜೆ ಪತ್ನಿ ಲಕ್ಷ್ಮಿ ಅವರನ್ನೂ ಬಾವಿಗೆ ದೂಡಿ ಕೊಲೆಗೆ ಯತ್ನಿಸಿದ್ದ. ಸೋಮಾರಿಯಾಗಿದ್ದ ಆರೋಪಿ ಹಿತೇಶ್, ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ, ಕೋವಿಡ್ ನಂತರ ಕೆಲಸವಿಲ್ಲದೆ ಮನೆಯಲ್ಲೇ ಇದ್ದ. ಪತ್ನಿ ಬೀಡಿ ಕಟ್ಟುವುದರ ಜತೆಗೆ ಹೊಟೇಲ್ ಕೆಲಸಕ್ಕೂ ಹೋಗುತ್ತಿದ್ದರು. ಪತ್ನಿ ಕೆಲಸಕ್ಕೆ ಹೋಗುತ್ತಿದ್ದಾಳೆ, ತಾನು ಮನೆಯಲ್ಲಿದ್ದೇನೆ ಎನ್ನುವ ಅವಮಾನವೂ ಆತನಿಗಿತ್ತು. ಪತ್ನಿ, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ, ಅವರನ್ನು ಸಾಯಿಸಿದರೆ ತಾನು ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ಮಕ್ಕಳನ್ನು ಕೊಲೆಗೈದು ಪತ್ನಿ ಹತ್ಯೆಗೆ ಯತ್ನಿಸಿದ್ದ.