ಸಿರವಾರ: ‘ಮಾಹಿತಿ ಹಕ್ಕು ಕಾಯ್ದೆಯಡಿ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡಲು ಕೋರಿ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಲು ಹಿಂದೇಟು ಹಾಕಿದ್ದ ಸಿರವಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೂವರು ಪಿಎಸ್‌ಐಗಳಿಗೆ ಮಾಹಿತಿ ಹಕ್ಕು ಆಯೋಗದ ಕಲುಬುರಗಿ ಪೀಠ ₹75 ಸಾವಿರ ದಂಡ ವಿಧಿಸಿದೆ.
ಪವನ ಕುಮಾರ ಕೋರಿಪಳ್ಳಿ ಎಂಬುವರು 2022 ಜೂನ್ 4 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡಲು ಕೋರಿ ಸಿರವಾರ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರು.
ಆಗ ಕರ್ತವ್ಯ ನಿರ್ವಹಿಸುತ್ತಿದ್ದ ಬಳ್ಳಾರಿ ಗ್ರಾಮೀಣ ಪಿಎಸ್‌ಐ ಗೀತಾಂಜಲಿ ಸಿಂಧೆ, ಇಡಪನೂರು ಪಿಎಸ್‌ಐ ಅವಿನಾಶ ಕಾಂಬ್ಳೆ ಅವರು ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಕ್ಕಾಗಿ 2024 ಸೆ.5 ರಂದು ₹50 ಸಾವಿರ ದಂಡ ವಿಧಿಸಿ ಅದೇಶಿಲಾಗಿತ್ತು. ಹಿಂದಿನ ಆದೇಶ ಪಾಲನೆ ಮಾಡದ ಕಾರಣ ಈ ಬಾರಿ ಪಿಎಸ್‌ಐ ಗುರುಚಂದ್ರಯಾದವ್ ಅವರಿಗೆ ₹25 ಸಾವಿರ ದಂಡ ಹೆಚ್ಚಿಸಿ ₹75 ಸಾವಿರ ದಂಡ ವಿಧಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೋರಿದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು 15 ದಿನಗಳಲ್ಲಿ ಮೇಲ್ಮನವಿದಾರರಿಗೆ ಒದಗಿಸಬೇಕು. ದಂಡ ಪಾವತಿಸದ, ಆಯೋಗದ ಆದೇಶ ಪಾಲನೆ ಮಾಡದ ಕಾರಣ ಶಿಸ್ತು ಕ್ರಮಕ್ಕೆ ಶಿಫಾರಸು ಎಚ್ಚರಿಕೆಯನ್ನು ಮಾಹಿತಿ ಹಕ್ಕು ಆಯೋಗ ನೀಡಿದೆ.