ನವದೆಹಲಿ: ಪ್ರತಿಷ್ಠಿತ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದ್ದು ಕರೆ ಮಾಡಿದರೆ10 ನಿಮಿಷದಲ್ಲಿ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಸೇವೆ ನೀಡುವ ಯೋಜನೆ ಆರಂಭಿಸಿದೆ. ಆರಂಭಿಕವಾಗಿ ಗುರುಗ್ರಾಮ್ ನ ಆಯ್ದ ಪ್ರದೇಶಗಳಲ್ಲಿ 10 ನಿಮಿಷದಲ್ಲಿ ಅಂಬುಲೆನ್ಸ್ ಸೇವೆ ನೀಡುವ ಯೋಜನೆ ಆರಂಭಿಸಿದೆ.
ಅಂಬ್ಯುಲೆನ್ಸ್‌ನಲ್ಲಿ ವೈದ್ಯ, ಸಹಾಯಕ, ತರಬೇತಿ ಪಡೆದ ಚಾಲಕ ಇರಲಿದ್ದಾರೆ’ ಬ್ಲಿಂಕಿಟ್ ಬಳಕೆದಾರರು ಆ್ಯಪ್ ನಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಬಹುದು.
ಇದೀಗ ಈ ಸೇವೆಯನ್ನು ಹರಿಯಾಣದ ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸಲು ಕಂಪನಿ ಯೋಜಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಪನಿ ಸಿಇಒ ಅಲ್ಟಿಂದರ್ ದಿಂಡ್ತಾ, ‘ನಮ್ಮ ನಗರಗಳಲ್ಲಿ ತ್ವರಿತ ಮತ್ತು ವಿಶ್ವಾಸಾರ್ಹ ಆ್ಯಂಬುಲೆನ್ಸ್ ಸೇವೆ ಒದಗಿಸುವ ಸಮಸ್ಯೆಯನ್ನು ಪರಿಹರಿಸಲು ನಾವು ನಮ್ಮ ಮೊದಲ ಹೆಜ್ಜೆ ಇಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
‘ಮೊದಲ ಐದು ಆ್ಯಂಬುಲೆನ್ಸ್‌ಗಳು ಇಂದಿನಿಂದ ಗುರುಗ್ರಾಮದ ರಸ್ತೆಗಳಲ್ಲಿ ಇಳಿಯಲಿವೆ. @letsblinkit ಅಪ್ಲಿಕೇಶನ್ ಮೂಲಕ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ಆ್ಯಂಬುಲೆನ್ಸ್ ಅನ್ನು ಬುಕ್ ಮಾಡಬಹುದು’ ಎಂದು ತಿಳಿಸಿದ್ದಾರೆ.