ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಸ ವರ್ಷ ಅಂತಾನೂ ನೋಡದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೆಹಲಿ ಸುತ್ತಿ ಬಂದಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಆಗ್ತಿದ್ದಾಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ’ರಾಜ್ಯದಲ್ಲಿ ಚುನಾವಣೆ ಮೂಲಕ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ’ ಎಂಬ ಮಾತು ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಉಂಟುಮಾಡಿದೆ. ಇದರ ಸುಳಿವು ಹಿಡಿದೇ ವಿಜಯೇಂದ್ರ ಅವರು ದೆಹಲಿ ವರಿಷ್ಟರನ್ನು ಭೇಟಿ ಮಾಡಿ ಖುರ್ಚಿ ಉಳಿಸಿಕೊಳ್ಳೋ ಕಸರತ್ತು ನಡೆಸಿದ್ರಾ ಅನ್ನೋ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಜೋರಾಗಿದೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ನವೆಂಬರ್‌ಗೆ ಒಂದು ವರ್ಷ ಆಗಿದೆ. ಆದ್ರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರಿಗೇ ಹಿಡಿಸಿರಲಿಲ್ಲ. ಆ ಹುದ್ದೆ ಮೇಲೆ ಅರವಿಂದ ಲಿಂಬಾವಳಿ ಸೇರಿದಂತೆ ಹಲವರ ಕಣ್ಣಿತ್ತು. ಆದ್ರೆ ಮತ್ತೆ ಬಿಎಸ್‌ವೈಗೆ ಹೈಕಮಂಡ್ ಮಣೆ ಹಾಕಿ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಯತ್ನಾಳ್ ಸೇರಿ ಹಲವರ ಮನಸ್ತಾಪಕ್ಕೆ ಕಾರಣವೂ ಆಗಿತ್ತು. ಯಡಿಯೂರಪ್ಪ ಅವರನ್ನ ಖುರ್ಚಿಯಿಂದ ಕೆಳಗಿಳಿಸೋಕೆ ಓಡಾಡಿದ್ದ ಯತ್ನಾಳ್‌ಗೆ ಮತ್ತೆ ಅದೇ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರನ ಕೈಕೆಳಗೆ ಕೆಲಸ ಮಾಡೋದು ಭಾರೀ ಮುಜುಗರ ತರಿಸಿತ್ತು. ಇದೇ ಕಾರಣಕ್ಕೆ ಇವತ್ತಿಗೂ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಎಂದು ಒಪ್ಪೋಕೆ ತಯಾರಿಲ್ಲ. ಬದಲಾಗಿ ಆಗಾಗ ವಿಜಯೇಂದ್ರ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ಸಿಡಿಸುತ್ತಲೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸೋ ಕೆಲಸ ಶುರು ಮಾಡಿಕೊಂಡಿದ್ರು. ಆದ್ರೆ ಹೈಕಮಾಂಡ್ ಮಧ್ಯಪ್ರವೇಶದಿಂದ ಬ್ರೇಕ್ ಬಿತ್ತಾದ್ರೂ ಒಳಗೊಳಗೇ ಖೆಡ್ಡಾ ತೋಡೋದನ್ನು ಇನ್ನೂ ಬಿಟ್ಟಿಲ್ಲ. ಇದರ ಬೆನ್ನಲ್ಲೇ ವಿಜಯೇಂದ್ರ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲೆಂದೇ ಹೊಸ ವರ್ಷ ಅಂತಾನೂ ನೋಡದೇ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿ ಮಾಡಿ ವಿರೋಧಿಗಳ ಆಟಕ್ಕೆ ಬ್ರೇಕ್ ಹಾಕಲು ನೋಡಿದ್ರು. ಆದ್ರೆ ಅವರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆಗೋಷ್ಟರಲ್ಲಿ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ವಿಜಯೇಂದ್ರ ಅವರನ್ನು ಅಚ್ಚರಿಪಡಿಸಿದೆ.
ವಿಜಯೇಂದ್ರ ಕೇವಲ ತಮ್ಮ ವಿರೋಧಿಗಳ ಬಗ್ಗೆ ದೂರು ಕೊಡಲು ಮಾತ್ರ ಹೈಕಮಾಂಡ್ ನಾಯಕರನ್ನು ಭೇಟಿ ಆಗಿರಲಿಲ್ಲ. ತಮ್ಮ ವರ್ಷದ ಸಾಧನೆಯ ಪಟ್ಟಿಯನ್ನು ನಾಯಕರ ಮುಂದಿಟ್ಟಿದ್ದರು. ಈ ಮೂಲಕ ೩ ವರ್ಷ ಅವಧಿಗೂ ತಾವೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ನಿಟ್ಟಿನಲ್ಲಿ ವಿಜಯೇಂದ್ರ ಕಸರತ್ತು ನಡೆಸಿದ್ದರು. ಪರಿಸ್ಥಿತಿ ನಮಗೆ ಪೂರಕವಾಗಿದ್ರೂ ಬಿಜೆಪಿಯ ಅಂತರಿಕ ಕಚ್ಚಾಟದಿಂದಾಗಿ ಯಾವುದೂ ಕೈಗೂಡುತ್ತಿಲ್ಲ ಎಂದು ವರಿಷ್ಠರಲ್ಲಿ ಅವಲತ್ತುಕೊಂಡಿದ್ರು. ಆದ್ರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯ ಸರ್ಕಾರವನ್ನ ಹಣಿಯೋದ್ರಲ್ಲಿ ಯಾಕೋ ವಿಫಲರಾದಂತೆ ಕಂಡುಬಂದಿದ್ದು ಮಾತ್ರ ಸತ್ಯವಾಗಿತ್ತು. ಅದಕ್ಕೆ ತಾಜಾ ಸಾಕ್ಷಿ ಕೊಡೋದಾದ್ರೆ ಕಳೆದ ಬಾರಿ ರಾಜ್ಯದಲ್ಲಿ ನಡೆದ ೩ ಕ್ಷೇತ್ರದ ಉಪಚುನಾವಣೆ. ಮೂರಕ್ಕೆ ಮೂರರಲ್ಲೂ ಕಾಂಗ್ರೆಸ್ ಗೆಲ್ಲೋದನ್ನ ಯಾರೂ ಊಹಿಸಿರಲಿಲ್ಲ. ಮೈತ್ರಿಗೆ ೨ ಕಾಂಗ್ರೆಸ್ ಒಂದು ಎಂದೇ ಊಹಿಸಲಾಗಿತ್ತು. ಏನೋ ಹೆಚ್ಚು ಕಮ್ಮಿ ಆದ್ರೂ ಬಿಜೆಪಿ ಒಂದಾದ್ರೂ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೂ ಹುಸಿಯಾಗಿತ್ತು. ಇದೇ ಸಮಯಕ್ಕಾಗಿ ಕಾದಿದ್ದ ಬಿಜೆಪಿಯ ರೆಬೆಲ್ಸ್‌ಗಳು ವಿಜಯೇಂದ್ರ ಅವರ ಅಧ್ಯಕ್ಷತೆಯನ್ನು ಮತ್ತೆ ಪ್ರಶ್ನೆ ಮಾಡೋಕೆ ಶುರುವಾಗಿದ್ರು. ‘ವಿಜಯೇಂದ್ರ ಇನ್ನೂ ಎಳಸು. ಹಿರಿಯರಿಗೆ ಅನುಭವಿಗಳಿಗೆ ಜವಾಬ್ದಾರಿಯುತ ರಾಜ್ಯಾಧ್ಯಕ್ಷ ಹುದ್ದೆ ನೀಡಲಿ’ ಎಂದು ಒತ್ತಡ ಹೇರಲು ಶುರುವಾಗಿದ್ರು. ಇದೇ ಕಾರಣಕ್ಕೆ ವಿಜಯೇಂದ್ರ ಅವರು ಹೊಸ ವರ್ಷ ಅಂತಾನೂ ನೋಡದೇ ಬಿಜೆಪಿ ವರಿಷ್ಟರನ್ನ ಭೇಟಿ ಮಾಡಿ ವಿರೋಧಿಗಳಿಗೆ ಸ್ವಷ್ಟ ಸಂದೇಶ ರವಾನಿಸಬೇಕು ಅಂತ ದೆಹಲಿ ಪ್ಲೈಟ್ ಹತ್ತಿದ್ದರು. ಆದ್ರೆ ಈಗ ಕೇಂದ್ರ ಸಚಿವರು ‘ಚುನಾವಣೆ ಮೂಲಕ ಮುಂದಿನ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ. ವಿಜಯೇಂದ್ರ ಅವರದ್ದು ಆಯ್ಕೆ ಅಲ್ಲ. ಹೈಕಮಾಂಡ್‌ನಿಂದ ನೇಮಕ ಆಗಿರುವುದು’ ಎನ್ನೋ ಮೂಲಕ ಖುದ್ದು ವಿಜಯೇಂದ್ರ ಅವರಿಗೆ ಶಾಕ್ ನೀಡಿದ್ದಾರೆ. ಇದರಿಂದಾಗಿ ವಿಜಯೇಂದ್ರ ಅವರ ಖುರ್ಚಿ ಅಲ್ಲಾಡಲು ಆರಂಭ ಆಯ್ತಾ? ಒಂದೇ ವರ್ಷಕ್ಕೆ ವಿಜಯೇಂದ್ರ ಅವರ ಅಧಿಕಾರವಧಿ ಮುಗಿತಾ ಅನ್ನೋ ಪ್ರಶ್ನೆಗಳು ಎದ್ದಿದೆ.
ಚುನಾವಣೆ ಅಗ್ನಿ ಪರೀಕ್ಷೆ..!
ವಿಜಯೇಂದ್ರ ಅವರು ಇದೀಗ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬೇಕಾದರೆ ಚುನಾವಣೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದರೆ ವಿಜಯೇಂದ್ರ ಅವರು ತಾವು ಅಂದುಕೊಂಡಂತೆ ಉಳಿದ ಅವಧಿಗೂ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಇದೀಗ ವಿಜಯೇಂದ್ರ ಅವರ ಭವಿಷ್ಯ ರಾಜ್ಯ ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರ ಕೈಯಲ್ಲಿದೆ. ಕರ್ನಾಟಕದಲ್ಲಿ ೩೭ ಜಿಲ್ಲಾ ಘಟಕಗಳಿದ್ದು ಸದ್ಯ ಜಿಲ್ಲಾಧ್ಯಕ್ಷರ ಬೆಂಬಲ ವಿಜಯೇಂದ್ರ ಅವರಿಗಿದ್ದು, ಚುನಾವಣೆ ನಡೆದರೆ ಮತ್ತೆ ಅವರೇ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
- ಮೆರಾಜ್