ಬೆಂಗಳೂರು: ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007ರ ಕಲಂ 16ರಡಿ ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ’ ಎಂದು ಪ್ರಕರಣವೊಂದರಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ನಗರದ ಪಿ.ಕೃಷ್ಣ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಅರ್ಜಿದಾರರು ಬೇಕಿದ್ದರೆ ತಮ್ಮ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಿವಿಲ್ ಕೋರ್ಟ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು’ ಎಂದು ನಿರ್ದೇಶಿಸಿದೆ.
ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಮಕ್ಕಳು ತಮಗೆ ಅಗತ್ಯ ಆರೈಕೆ ಮತ್ತು ಮೂಲಸೌಕರ್ಯ ಒದಗಿಸಬೇಕೆಂಬ ಷರತ್ತುಗಳನ್ನು ವಿಧಿಸಬಹುದು. ಒಂದು ವೇಳೆ ಅವರು ಆ ಷರತ್ತುಗಳನ್ನು ಪೂರೈಸದೆ ಹೋದಲ್ಲಿ ಉಪ ವಿಭಾಗಾಧಿಕಾರಿ ಮುಂದೆ ಗಿಫ್ಟ್ ಡೀಡ್ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಇದರನ್ವಯ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಲಂ 16ರಡಿ ಅಂತಹ ಅರ್ಜಿಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬಹುದು’ ಎಂದು ನ್ಯಾಯಪೀಠ ಹೇಳಿದೆ
ಕೃಷ್ಣ ಅವರು 2019ರ ಫೆಬ್ರುವರಿ 27ರಂದು ಆಡುಗೋಡಿಯಲ್ಲಿರುವ ತಮ್ಮ ಸ್ಥಿರಾಸ್ತಿಯಲ್ಲಿ 1,500 ಚದರ ಅಡಿ ಜಾಗವನ್ನು ಹಿರಿಯ ಪುತ್ರ ಅಯ್ಯಪ್ಪ ಹೆಸರಿಗೆ ಗಿಫ್ಟ್ ಡೀಡ್ ಮಾಡಿದ್ದರು. ಕೆಲವು ವರ್ಷಗಳ ಬಳಿಕ, ‘ನನ್ನ ಹಿರಿಯ ಪುತ್ರ ನನಗೆ ಯಾವುದೇ ಸೌಕರ್ಯ ಒದಗಿಸುತ್ತಿಲ್ಲ. ನನ್ನಿಂದ ಅಕ್ರಮವಾಗಿ ಗಿಫ್ಟ್ ಡೀಡ್ ಮಾಡಿಸಿಕೊಳ್ಳಲಾಗಿದೆ. ಹಾಗಾಗಿ, ಗಿಫ್ಟ್ ಡೀಡ್ ರದ್ದು ಮಾಡಬೇಕು’ ಎಂದು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ್ದ ಉಪ ವಿಭಾಗಾಧಿಕಾರಿ 2023ರ ಫೆಬ್ರುವರಿ 27ರಂದು ಗಿಫ್ಟ್ ಡೀಡ್ ರದ್ದು ಮಾಡಿದ್ದರು.