ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಎರಡು ಶತಮಾನಗಳಿಗೂ ಹೆಚ್ವು ಪುರಾತನ ಮಸೀದಿಯೊಂದು ಶಿಥಿಲಾವಸ್ಥೆಯಲ್ಲಿದ್ದಾಗ, ಅದರ ಅಭಿವೃದ್ಧಿಗೆ ಮುಸ್ಲಿಮರೊಂದಿಗೆ ಹಿಂದೂಗಳು ಮತ್ತು ಕ್ರೈಸ್ತರು ನೆರವಾಗುವ ಮೂಲಕ ಸರ್ವಧರ್ಮ ಸಮಾನತೆಯ ಸಂದೇಶ ಸಾರಿದ್ದಾರೆ.
ಧರ್ಮ ಭೇದದ ಭಾವವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ನಿಂತು ಹೊಸ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದರಿಂದ ಪೊನ್ನಂಪೇಟೆಯಲ್ಲಿ ಶಾಫಿ ಜುಮಾ ಮಸೀದಿ ಶನಿವಾರ ಉದ್ಘಾಟನೆಗೊಂಡಿತು.
ಬೆಂಗಳೂರಿನ ಬಿಬಿಎಂಪಿ ಸದಸ್ಯರಾಗಿದ್ದ ಬಿಜೆಪಿಯ ನಾರಾಯಣರಾಜು ಎಂಬುವವರು ಮಸೀದಿಗಾಗಿ ₹ 2.5 ಲಕ್ಷವನ್ನು ಉದಾರವಾಗಿ ದೇಣಿಗೆ ನೀಡಿದ್ದಾರೆ. ಸುರೇಶ್ ಎಂಬುವವರು ಮಸೀದಿಗೆ ಬೇಕಾದ ಪೀಠೋಪಕರಣಗಳನ್ನು ತಯಾರಿಸಿದ್ದಾರೆ. ಕ್ರೈಸ್ತ ಧರ್ಮದ ರಾಜು ಪಿಳ್ಳೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ಅನೇಕ ಮಂದಿ ವಿವಿಧ ಧರ್ಮೀಯರು ಕೈಜೋಡಿಸುವ ಮೂಲಕ ಎರಡು ದಶಕದ ಮಸೀದಿಗೆ ಹೊಸ ರೂಪ ನೀಡಿದ್ದಾರೆ.
ಇಂತಹ ಅಪರೂಪದ ಕೋಮುಸೌಹಾರ್ದದ ಇತಿಹಾಸವುಳ್ಳ ಶಾಫಿ ಜುಮಾ ಮಸೀದಿಯ ನಿರ್ಮಾಣಕ್ಕೆ ₹ 2 ಕೋಟಿಗೂ ಅಧಿಕ ವೆಚ್ಚವಾಗಿದೆ. ಏಕಕಾಲಕ್ಕೆ 600 ಮಂದಿ ಪ್ರಾರ್ಥನೆ ಸಲ್ಲಿಸಬಹುದಾದಷ್ಟು ವಿಸ್ತಾರವಾಗಿರುವ ಇದು ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದೆ.