ಇಸ್ಲಮಾಬಾದ್: ಆಲ್ ಖಾದಿರ್ ಟ್ರಸ್ಟ್ ನ 190 ಮಿಲಿಯನ್ ಪೌಂಡ್‌ಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರು ತಪ್ಪಿತಸ್ಥರೆಂದು ಶುಕ್ರವಾರ ತೀರ್ಪು ನೀಡಿರುವ ಪಾಕಿಸ್ತಾನದ ನ್ಯಾಯಾಲಯ, ಇಮ್ರಾನ್ ಖಾನ್ ಗೆ 14 ವರ್ಷ ಆತನ ಪತ್ನಿ ಬುಶ್ರಾ ಬೀಬಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ತೀರ್ಪನ್ನು ಪ್ರಕಟಿಸಿದ್ದಾರೆ. ಈ ಹಿಂದೆ ವಿವಿಧ ಕಾರಣಗಳಿಂದಾಗಿ ಮೂರು ಬಾರಿ ತೀರ್ಪನ್ನು ಮುಂದೂಡಲಾಗಿತ್ತು. ಆದಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಲಾಗಿದೆ.
ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 2023ರ ಡಿಸೆಂಬರ್‌ನಲ್ಲಿ 72 ವರ್ಷದ ಇಮ್ರಾನ್ ಖಾನ್, 50 ವರ್ಷದ ಬುಶ್ರಾ ಬೀಬಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು.