ಬೆಂಗಳೂರು: ಸಹಮತದ ಲೈಂಗಿಕ ಸಂಬಂಧ ಇದೆ ಎಂದಾಕ್ಷಣ ಪರಿಚಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ, ಹಿಂಸಿಸಿದರೆ ಅಂತಹುದಕ್ಕೆಲ್ಲ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಈ ಸಂಬಂಧ ಸರ್ಕಲ್ ಇನ್‌ಸ್ಪೆಕ್ಟರ್‌ವೊಬ್ಬರ ವಿರುದ್ಧ ಐಪಿಸಿಯ ವಿವಿಧ ಕಲಂಗಡಿ ದಾಖಲಾಗಿರುವ ಕ್ರಿಮಿನಲ್ ಆರೋಪ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ಅತ್ಯಾಚಾರ ಆರೋಪ ಸೇರಿದಂತೆ ದಾಖಲಾಗಿರುವ ವಿವಿಧ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ 56 ವರ್ಷದ ಸರ್ಕಲ್ ಇನ್‌ಸ್ಪೆಕ್ಟರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ವಿಚಾರಣೆ ಬಳಿಕ ಸರ್ಕಲ್ ಇನ್‌ಸ್ಪೆಕ್ಟರ್ ವಿರುದ್ಧದ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿದೆ ಎಂದು ಹೇಳಿರುವ ನ್ಯಾಯಪೀಠ, 2021 ನವೆಂಬರ್ 11ರಂದು ಆರೋಪಿಯು 30 ವರ್ಷದ ಸಂತ್ರಸ್ತೆಯ ಜೊತೆ ಯಾವ ರೀತಿ ವರ್ತಿಸಿದ್ದಾರೆ ಎಂಬುದನ್ನು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಹೀಗಾಗಿ, ಕೊಲೆ ಯತ್ನ, ಹಲ್ಲೆ ಮತ್ತು ಬೆದರಿಕೆ ಆರೋಪಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಹೇಳಿದೆ.
ಇಬ್ಬರ ಮಧ್ಯ ಒಪ್ಪಿತ ಲೈಂಗಿಕ ಸಂಬಂಧ ಇದೆ ಎಂದ ಮಾತ್ರಕ್ಕೆ ಆರೋಪಿಯು ಆಕೆಯ ಮೇಲೆ ಎಸಗಿರುವ ದೌರ್ಜನ್ಯ ಹಾಗೂ ವ್ಯಕ್ತಪಡಿಸಿರುವ ಮಹಿಳಾ ವಿರೋಧಿ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ ?: ಸಂತ್ರಸ್ತೆಯು ಸಾಮಾಜಿಕ ಕಾರ್ಯಕರ್ತೆಯಾಗಿದ್ದು 2018ರಲ್ಲಿ ಯಾವುದೋ ಕೇಸಿನ ವಿಚಾರ ಸಲುವಾಗಿ ಸಾರ್ವಜನಿಕರ ಜೊತೆ ಗ್ರಾಮಾಂತರ ವೃತ್ತ ಕಚೇರಿಗೆ ಹೋದಾಗ ಪರಿಚಯವಾಗಿದ್ದ ಆರೋಪಿ ಸರ್ಕಲ್ ಇನ್‌ಸ್ಪೆಕ್ಟರ್ ನಂತರ ಈ ಮಹಿಳೆಯೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು ಮತ್ತು ಲೈಂಗಿಕ ಸಂಬಂಧ ಬೆಳೆಸಿದ್ದರು’ ಎಂಬುದು ದೋಷಾರೋಪ ಪಟ್ಟಿಯಲ್ಲಿದೆ.
ನಂತರ ಸಂತ್ರಸ್ತ ಮಹಿಳೆ ನನ್ನ ಮೇಲೆ ಬಲವಂತದಿಂದ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾರೆ. ಎಂದು ಆರೋಪಿಸಿ ಸರ್ಕಲ್ ಇನ್‌ಸ್ಪೆಕ್ಟರ್ ವಿರುದ್ಧ ದೂರು ನೀಡಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ದೂರನ್ನು ವಾಪಸು ಪಡೆಯುವಂತೆ ಒತ್ತಾಯಿಸಿ 2021ರ ನವೆಂಬರ್ 11ರಂದು ನೆಪ ಹೇಳಿ ತಾವಿದ್ದಲ್ಲಿಗೆ ನನ್ನನ್ನು ಕರೆಯಿಸಿಕೊಂಡು ಬಲವಂತವಾಗಿ ಲಾಡ್ಜ್ ವೊಂದರಲ್ಲಿ ಇರಿಸಿಕೊಂಡು ಬೂಟುಗಾಲಿನಿಂದ ಒದ್ದು ದೈಹಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ, ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಕೊಡಿಸುವಂತೆ ಕೋರಿದ್ದರು.