ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕೆ ತೆರಳುವ ವೇಳೆ ಮಧ್ಯರಾತ್ರಿ ಭಾರಿ ನೂಕು ನುಗ್ಗಲು ಉಂಟಾದ ಕಾರಣ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿಕೆ ಆಗಿದೆ.ಈ ಘಟನೆಯಲ್ಲಿ ಕರ್ನಾಟಕದ ಬೆಳಗಾವಿಯಿಂದ ತೆರಳಿದ್ದವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ
ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕೆ ತೆರಳುವ ವೇಳೆ ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 30 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಹಾಗೂ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಡಿಐಜಿ ವೈಭವ್ ಕೃಷ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
90 ಜನರನ್ನು ಆಸ್ಪತ್ರೆಗೆ ಕರೆತರಲಾಗಿದೆ. 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 25 ಮೃತರನ್ನು ಗುರುತಿಸಲಾಗಿದೆ. ಭಾರೀ ಜನಸಂದಣಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಕರ್ನಾಟಕದ ಬೆಳಗಾವಿಯಿಂದ ತೆರಳಿದ್ದವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಇನ್ನೂ ಕೆಲವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇಂದು ಮೌನಿ ಅಮಾವಾಸ್ಯೆಯಾಗಿದ್ದು ಮತ್ತೊಂದು ಪವಿತ್ರ ಸ್ನಾನಕ್ಕೆ ಪ್ರಮುಖವಾದ ದಿನ. ಈ ದಿನ 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ನಡೆಸುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿತ್ತು. ಈ ನಿಟ್ಟಿನಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ.