ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಕಂಟ್ರಿಮೇಡ್
ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಅಪರಾಧಿಗೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಐಪಿಸಿ) ಕೊಲೆ – ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಬಂಧಿತನಾಗಿದ್ದ ಅಪರಾಧಿ ಮಹೇಶ್‌ಗೆ ನ್ಯಾ.ಗೀತಾ ಕೆ.ಬಿ.ಅವರು ಜೀವಾವಧಿ ಶಿಕ್ಷೆ,3.50 ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಅಪರಾಧಿ ದಂಡ ಪಾವತಿಸಲು ವಿಫಲರಾದರೆ ಕಠಿಣ ಕಾರಾಗೃಹ ಶಿಕ್ಷೆ, ವಸೂಲಿಯಾದ ದಂಡ ಮೊತ್ತದಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ಗೌತಮಿ ಕುಟುಂಬಕ್ಕೆ 2 ಲಕ್ಷ ಹಾಗೂ ಗುಂಡೇಟು ತಿಂದಿದ್ದ ಶಿರೀಷಾಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ 2 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ಪಿಯು ಕಾಲೇಜಿನಲ್ಲಿ ಅಪರಾಧಿ ಮಹೇಶ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿಯೂ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಹಾಸ್ಟೆಲ್ ನಲ್ಲಿ ಗುಂಡೇಟು ತಿಂದಿದ್ದ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಗೌತಮಿ ಹಾಗೂ ಪ್ರಥಮ ಪಿಯು ಓದುತ್ತಿದ್ದ ಶಿರೀಷಾ ತಂಗಿದ್ದರು. 2015 ಮಾರ್ಚ್ 31ರ ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್‌ಗೆ ನುಗ್ಗಿದ ಮಹೇಶ್, ಪಿಸ್ತೂಲ್‌ನಿಂದ ಗೌತಮಿ ತಲೆಗೆ ಹಾಗೂ ಶಿರಿಷಾ ಮುಖದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ.
ದುರ್ಘಟನೆಯಲ್ಲಿ ಗೌತಮಿ ಸಾವನ್ನಪ್ಪಿದರೆ ಶಿರೀಷಾ ಗಂಭೀರವಾಗಿ ಗಾಯಗೊಂಡಿದ್ದಳು. ಕೊಲೆ -ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಎಂ.ಎಂ.ಪ್ರಶಾಂತ್ ಅವರು ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಏನಿದು ಪ್ರಕರಣ?: ಹಾಸ್ಟೆಲ್‌ನಲ್ಲಿ ರಾತ್ರಿ
ಕಾವಲುಗಾರನಾಗಿ ಕೆಲಸ ಮಾಡುವಾಗ ಮಹೇಶ್ ಅಕ್ರಮವಾಗಿ ವಿದ್ಯಾರ್ಥಿನಿಯರ ವಸತಿನಿಲಯದ ಮುಂದೆ ಓಡಾಡುತ್ತಿದ್ದ. ಇದಕ್ಕೆ ಗೌತಮಿ ಆಕ್ಷೇಪಿಸಿ ಬೈದು ವಾಪಸ್ ಕಳುಹಿಸಿದ್ದರು. ಅಲ್ಲದೇ ಕೃತ್ಯ ಎಸಗುವ ಒಂದು ತಿಂಗಳ ಹಿಂದೆ ಸಿಇಟಿ ಪರೀಕ್ಷೆಗಾಗಿ ಗೌತಮಿ ಕಾಲೇಜು ಆವರಣದಲ್ಲಿ ಅರ್ಜಿ ಭರ್ತಿ ಮಾಡುವಾಗ ಅಪರಾಧಿ ಅರ್ಜಿ ಭರ್ತಿ ಮಾಡಿಕೊಡಲೇ ಎಂದು ಕೇಳಿದ್ದ. ಇದಕ್ಕೆ ಮೃತ ಗೌತಮಿಯು ನೀನು ಕಾಲೇಜು ಅಟೆಂಡರ್ ಆಗಿದ್ದು, ನೀನೇನು ಅರ್ಜಿ ಭರ್ತಿ ಮಾಡಿಕೊಡುತ್ತೀಯಾ? ನಿನ್ನ ಕೆಲಸ ನೋಡು ಎಂದು ಹೇಳಿದ್ದಳು. ಎರಡು ಬಾರಿ ತಮ್ಮನ್ನ ಹೀಯಾಳಿಸಿರುವುದಾಗಿ ಭಾವಿಸಿದ ಆರೋಪಿ ಸಂಚು ರೂಪಿಸಿ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಶೂಟ್ ಮಾಡಿ ಹತ್ಯೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಯುಸಿ ಓದಿಕೊಂಡಿದ್ದ ಅಪರಾಧಿ ಮಹೇಶ್ ಅವಮಾನ ಮಾಡಿದ್ದ ವಿದ್ಯಾರ್ಥಿನಿ ಹತ್ಯೆ ಮಾಡುವ ಮುನ್ನ ಬೆಂಗಳೂರಿನಿಂದ ಬಿಹಾರದ ಮುನ್ಗರ್ ಎಂಬ ಪ್ರದೇಶಕ್ಕೆ ತೆರಳಿದ್ದ. ಅಕ್ರಮ ಪಿಸ್ತೂಲ್ ಮಾರಾಟಗಾರರನ್ನ ಸಂಪರ್ಕಿಸಿ 15 ಸಾವಿರ ರೂ. ಪಿಸ್ತೂಲ್ ಖರೀದಿಸಿ ನಗರಕ್ಕೆ ವಾಪಸ್ ಆಗಿದ್ದ.