384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಪ್ರಕಟ
ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ನಡೆಸಿದ್ದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪೂರ್ವಭಾವಿ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಜೊತೆಗೆ ಕನ್ನಡ ಪ್ರಶ್ನೆ ಪತ್ರಿಕೆಯ ಲೋಪದೋಷಗಳಿಗೆ ಒಟ್ಟು 5 ಕೃಪಾಂಕ ಘೋಷಿಸಿದೆ.
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ ಎಂದು ಅಭ್ಯರ್ಥಿಗಳು ಆಕ್ಷೇಪಿಸಿದ್ದರೂ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕವನ್ನು
ಕೆಪಿಎಸ್ಸಿ ನೀಡಿದೆ. ಇದು ಅಭ್ಯರ್ಥಿಗಳ ಅಸಮಾಧಾನ ಕ್ಕೆ ಕಾರಣವಾಗಿದೆ.
ಕೀ ಉತ್ತರಗಳಿಗೆ ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಆಧರಿಸಿ ಪತ್ರಿಕೆ -1ರಲ್ಲಿ ಒಟ್ಟು ಏಳು ಪ್ರಶ್ನೆಗಳಿಗೆ ಕೀ ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಪತ್ರಿಕೆ -2ರಲ್ಲಿ 6 ಪ್ರಶ್ನೆಗಳ ಆ ಉತ್ತರಗಳನ್ನು ಪರಿಷ್ಕರಿಸಿದೆ. ಜೊತೆಗೆ ಪತ್ರಿಕೆ 1, ಪತ್ರಿಕೆ 2ರಲ್ಲಿ ಕ್ರಮವಾಗಿ ತಲಾ 3 ಮತ್ತು 2 ಕೃಪಾಂಕ ನೀಡಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿನ ಲೋಪದೋಷಗಳನ್ನು ಪ್ರಶ್ನಿಸಿ ಅನೇಕ ಅಭ್ಯರ್ಥಿಗಳು ಈಗಾಗಲೇ ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತ ನ್ಯಾಯಾಧಿಕರಣ(ಕೆಎಟಿ) ಮೊರೆ ಹೋಗಿದ್ದು ಈ ಸಂಬಂಧ ವಿಚಾರಣೆ ನಡೆಯುತ್ತಿದೆ.