ನವದೆಹಲಿ: ಪೊಲೀಸರು ಆರೋಪಿಗಳಿಗೆ ಇ-ಮೇಲ್, ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪೋಲಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್‌ಪಿಸಿ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 35ರಡಿ ನಿಗದಿತ ಸೇವಾ ವಿಧಾನ ಮೂಲಕವಷ್ಟೇ ನೋಟಿಸ್ ತಲುಪಿಸಬೇಕು. ವಾಟ್ಸಾಪ್ ಅಥವಾ ಇತರೆ ವಿದ್ಯುನ್ಮಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್‌ಗಳನ್ನು ಕಳುಹಿಸು ವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಅಪರಾಧ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ.ಎಂ.ಎಂ. ಸುಂದರೇಶ್ ಮತ್ತು ನ್ಯಾ.ರಾಜೇಶ್ ಬಿಂದಾಲ್ ಅವರ ಪೀಠ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಗೆ ಈ ಆದೇಶ ತಲುಪುವಂತೆ ಮಾಡುವುದಕ್ಕೂ ಸೂಚನೆ ನೀಡಿದೆ.
ಮೇಲ್ಮನವಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ, 7 ವರ್ಷಕ್ಕೂ ಕಡಿಮೆ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಪ್ರಕರಣಗಳಲ್ಲಿ ಪೋಲಿಸರು ಸಿಆರ್‌ಪಿಸಿ ಕಲಂ 41ಎ ಅಡಿ ಕಡ್ಡಾಯ ನೋಟಿಸ್ ಕಾರ್ಯವಿಧಾನವನ್ನು ಅನುಸರಿಸದೆ ವ್ಯಕ್ತಿಗಳನ್ನು ಬಂಧಿಸುವುದನ್ನು ನಿಷೇಧಿಸಿದ್ದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.