ಸುದ್ದಿ

ಮರ್ಯಾದಾ ಹತ್ಯೆ ಪ್ರಕರಣ: ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Share It

ಅಂತರ್ಜಾತಿ ವಿವಾಹವಾದ ಜೋಡಿಯ ಮರ್ಯಾದಾ ಹತ್ಯೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಗದಗ: ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ನಾಲ್ವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಗದಗದಲ್ಲಿ 2019 ರಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದ್ದು, ಎಲ್ಲಾ ನಾಲ್ವರು ಅಪರಾಧಿಗಳಿಗೂ ಶಿಕ್ಷೆ ವಿಧಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಜೋಡಿ ರಮೇಶ ಮಾದರ ಮತ್ತು ಗಂಗಮ್ಮ ಮಾದರ ಪ್ರೀತಿಸಿ ಮದುವೆಯಾಗಿದ್ದರು. ಈ ಇಬ್ಬರನ್ನೂ 2019ರ ನವೆಂಬರ್ 6ರಲ್ಲಿ ಗಂಗಮ್ಮ ಕುಟುಂಬಸ್ಥರು ಬರ್ಬರವಾಗಿ ಕೊಲೆ ಮಾಡಿದ್ದರು.

ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ 427, 449, 302, 506(2) ಅಡಿಯಲ್ಲಿ ನ್ಯಾಯಾಲಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡಗೆ ಮರಣ ದಂಡನೆ ವಿಧಿಸಿ ಆದೇಶಿಸಿದೆ.


Share It

You cannot copy content of this page