ಮಹಾ ಕುಂಭಮೇಳ ಸಂತ್ರಸ್ತರಿಗಾಗಿ
25,000 ಯಾತ್ರಾರ್ಥಿಗಳಿಗೆ ಆಶ್ರಯ, ಆಹಾರ ಹಾಗೂ ಕಂಬಳಿಗಳ ಸರಬರಾಜು ನೀಡಿ ಮಾನವೀಯತೆ
ಪ್ರಯಾಗ್ ರಾಜ್:ಮಹಾ ಕುಂಭಮೇಳದಲ್ಲಿ ಜ. 28ರಂದು ಮೌನಿ ಅಮಾವಾಸ್ಯೆ ದಿನ ಅಮೃತ ಸ್ನಾನ ಮಾಡುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಆಶ್ರಯ, ಆಹಾರ ಹಾಗೂ ಕಂಬಳಿಗಳನ್ನು ಒದಗಿಸುವ ಮೂಲಕ ಸಹೋದರತೆ ಮೆರೆದಿರುವ ಬಗ್ಗೆ ವರದಿಯಾಗಿದೆ.
ಗಂಗಾ ನದಿಯ ಸಂಗಮದಲ್ಲಿ ಜರುಗಿದ ಕಾಲ್ತುಳಿತದಲ್ಲಿ ಸುಮಾರು 30 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ನೋವಿನ ಘಟನೆಯ ನಂತರ, ಜನವರಿ 29ರಂದು ಪ್ರಯಾಗ್ ರಾಜ್ ನಲ್ಲಿನ ಹತ್ತು ಪ್ರದೇಶಗಳಲ್ಲಿ ತಮ್ಮ ಮಸೀದಿಗಳು, ದರ್ಗಾಗಳು, ಇಮಾಂಬರಗಳು ಹಾಗೂ ತಮ್ಮ ನಿವಾಸಗಳ ಬಾಗಿಲನ್ನು ತೆರೆದ ಮುಸ್ಲಿಮರು, ಸುಮಾರು 25,000ದಿಂದ 26,000 ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಿದರು. ಅಗತ್ಯವಿದ್ದವರಿಗೆ ಆಹಾರ, ಬೆಚ್ಚನೆಯ ಹಾಸಿಗೆ ಹಾಗೂ ವೈದ್ಯಕೀಯ ನೆರವನ್ನು ಒದಗಿಸಿದರು.
ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಕಾಲ್ತುಳಿತ ಘಟನೆಯಿಂದ ಹೈವೇಗಳಲ್ಲಿ ಸಂಚಾರ ದಟ್ಟಣೆಯುಂಟಾಗಿ, ಸಾವಿರಾರು ಮಂದಿ ತಾವಿದ್ದಲ್ಲಿಯೇ ಸಿಲುಕಿಕೊಂಡರು. ಬಸ್ ಗಳು ದಾರಿ ಮಧ್ಯದಲ್ಲೇ ನಿಂತು ಹೋಗಿದ್ದರಿಂದ, ಅವರೆಲ್ಲ ಬೀದಿಗಳಲ್ಲಿ ತಮ್ಮ ರಾತ್ರಿಯನ್ನು ಕಳೆಯುವಂತಾಯಿತು.
ಈ ರಾತ್ರಿಯ ನಂತರ, ಜನವರಿ 29ರಂದು, ಖುಲ್ದಾಬಾದ್, ನಖ್ಯಸ್ ಕೊಡ್ತಾ, ರೋಶನ್ ಬಾಫ್, ಹಿಮ್ಮತ್ ಗಂಜ್, ರಾಣಿ ಮಂಡಿ ಹಾಗೂ ಶಾಗಂಜ್ ನಿವಾಸಿಗಳು ಯಾತ್ರಾರ್ಥಿಗಳನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದರು.
ಮುಸ್ಲಿಂ ಸಮುದಾಯದ ಸದಸ್ಯರು ಯಾತ್ರಾರ್ಥಿಗಳಿಗೆ ಟೀ, ಉಪಾಹಾರ ಹಾಗೂ ಊಟವನ್ನು ಪೂರೈಸಿದರು. ಸ್ಥಳೀಯರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ಭಕ್ತಾದಿಗಳಿಗೆ ಹಲ್ವಾಪೂರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಿದರು ಎಂದು ವರದಿಯಾಗಿದೆ.