ನ್ಯಾಕ್ ಮಾನ್ಯತೆ ನೀಡಲು 37 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ ಗಾಯತ್ರಿ ದೇವರಾಜ್ ಸೇರಿ 10 ಮಂದಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕೆಎಲ್‌ಇಎಫ್ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಗ್ರೇಡ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಭ್ರಷ್ಟಾಚಾರ ಮತ್ತು ಲಂಚ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಗಾಯತ್ರಿ ದೇವರಾಜ್‌ರನ್ನು ಹೈದರಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿ ವೇಳೆ 37 ಲಕ್ಷ ರೂ. ನಗದು, 6 ಲ್ಯಾಪ್ಟಾಪ್, ಐಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿರುವ ಗಾಯತ್ರಿ, ನ್ಯಾಕ್ ಸಮಿತಿಯ ಸದಸ್ಯೆ ಕೂಡ ಆಗಿದ್ದಾರೆ. ಆಂಧ್ರದ ಗುಂಟೂರಿನ ಕೆಎಲ್‌ಇಎಫ್ ವಿಶ್ವವಿದ್ಯಾಲಯದ ನ್ಯಾಕ್ ಕಮಿಟಿ ಪರಿಶೀಲನೆ ವೇಳೆ ಲಂಚ ಪಡೆದ ಆರೋಪ ಇವರ ಮೇಲಿದೆ.
ನ್ಯಾಕ್ ಸಮಿತಿ ತಪಾಸಣಾ ತಂಡದ 7 ಸದಸ್ಯರು ಹಾಗೂ ಮೂವರು ಕೆಎಲ್ಇಎಫ್ ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ ಎನ್ನಲಾಗಿದ್ದು, ಆಂದ್ರಪ್ರದೇಶದ ಕೆಎಲ್ಇಎಫ್ ಸಂಸ್ಥೆಯಿಂದ 37 ಲಕ್ಷ ರೂ.ಲಂಚ ಪಡೆದ ಆರೋಪ ಇವರ ಮೇಲೆ ಕೇಳಿ ಬಂದಿದೆ.
ನ್ಯಾಕ್ ಸದಸ್ಯರ ಬಂಧನದ ಬೆನ್ನಲ್ಲೆ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.