ಬೆಂಗಳೂರು: ನಮ್ಮ ಮೆಟ್ರೋ (Metro) ಪ್ರಯಾಣ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ದರ ಏರಿಕೆ ವಿರೋಧಿಸಿ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಆಕ್ರೋಶದ ಬೆನ್ನಲ್ಲೇ ದರ ಪರಿಷ್ಕರಣೆ ಮಾಡಿದ್ದೇವೆ ಅಂತಾ ಹೇಳಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ಇಳಿಕೆಯ ಪ್ರಮಾಣದ ಬಿಸಿ ಮುಟ್ಟಿದೆ.
ಇದೀಗ ಬಿಎಂಆರ್‌ಸಿಎಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನಮ್ಮ ಮೆಟ್ರೋ ಬಾಯ್ಕಾಟ್ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಸಿದ್ಧತೆ ನಡೆಸಿದೆ. ದರ ಏರಿಕೆ ಖಂಡಿಸಿ ಒಂದು ದಿನ ಅಥವಾ ಒಂದು ವಾರ ಮೆಟ್ರೋ ಹತ್ತದಿರಲು ಪ್ಲಾನ್ ಮಾಡಲಾಗುತ್ತಿದೆ.
ಟಿಕೆಟ್ ದರ ಕಡಿಮೆ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಭಾನುವಾರದವರೆಗೆ ಗಡುವು ನೀಡಿದೆ. ಅಷ್ಟರಲ್ಲಿ ಟಿಕೆಟ್ ದರ ಕಡಿಮೆ ಮಾಡಲಿಲ್ಲ ಅಂದರೆ ಮೆಟ್ರೋ ಬಾಯ್ಕಾಟ್ ಮಾಡುವುದಾಗಿ ತಿಳಿಸಲಾಗಿದೆ. ಈ ಕುರಿತಾಗಿ ಬುಧವಾರ ಸುದ್ದಿಗೋಷ್ಠಿ, ಭಾನುವಾರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮೆಟ್ರೋ ಬಾಯ್ಕಾಟ್ ದಿನಾಂಕ ಘೋಷಣೆ ಆಗಲಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಪರಿಣಾಮ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಈ ನಡುವೆ ಏರಿಸಿರುವ ದರ ಹಿಂಪಡೆಯುವಂತೆ ‘ಮೆಟ್ರೋ ಪ್ರಯಾಣಿಕರ ಸಂಘಟನೆ’ ಹೋರಾಟ ವನ್ನು ತೀವ್ರಗೊಳಿಸಲು ಮುಂದಾಗಿದ್ದು, ಪ್ರತಿಭಟ ನಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದೆ.
‘ಬೆಂಗಳೂರು ಉಳಿಸಿ ಸಮಿತಿ’ ಸಹಯೋಗದಲ್ಲಿ ಪ್ರಯಾಣಿಕರ ಸಂಘ ನಗರದಲ್ಲಿನ ಐಟಿ ಸೇರಿ ಖಾಸಗಿ ಕಚೇರಿಗಳು, ಪ್ರಯಾಣಿಕರು ಬರುವ ಮೆಟ್ರೋ ನಿಲ್ದಾಣಗಳ ಬಳಿ ಹಾಗೂ ಇತರೆಡೆ ಕರಪತ್ರ ವಿತರಣೆ ಮಾಡಲು ಮುಂದಾಗಿದೆ. ಈ ಮೂಲಕ ದರ ಏರಿಕೆ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಹೋರಾಟಕ್ಕೆ ರೈ ಕೈ ಜೋಡಿಸುವಂತೆ ಕೋರಲು ನಿರ್ಧರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಕೈಬಿಟ್ಟು ದರ ಇಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿದ ಸಂಘಟನೆಯ ರಾಜೇಶ್ ಭಟ್, ಭಾನುವಾರ ಅರಮನೆ ರಸ್ತೆಯ ಸಭಾಂಗಣ ವೊಂದರಲ್ಲಿ ಮೆಟ್ರೋ ದರ ಏರಿಕೆ ಖಂಡಿಸಿ ಪ್ರತಿ ಭಟನಾ ಸಮಾವೇಶ ಏರ್ಪಡಿಸಲು ಮುಂದಾಗಿದ್ದೇವೆ. ನಗರ ಸಾರಿಗೆ ತಜ್ಞರು, ದರ ನಿಗದಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ ಎಂದರು.