ಮಾಜಿ ಗೆಳೆಯನ ಜೊತೆ ಸಂಪರ್ಕ ಹೊಂದಿದ್ದ ಪತ್ನಿಯ ವಂಚನೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಬಯಲು ಮಾಡಿರುವ ಪತಿ, ಪತ್ನಿ ಹಾಕಿದ್ದ ವರದಕ್ಷಿಣೆ ಕಿರುಕುಳ ಸುಳ್ಳು ಆರೋಪವನ್ನು ಕೋಟ್೯ನಲ್ಲಿ ಸಾಬೀತು ಮಾಡುವ ಮೂಲಕ ನಾಲ್ಕು ವರ್ಷಗಳ ವಿಚ್ಛೇದನ ಹೋರಾಟದಲ್ಲಿ ಗೆದ್ದಿದ್ದಾನೆ.
ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್ ಈ ದಂಪತಿಗೆ ವಿಚ್ಚೇದನ ನೀಡಿ ಆದೇಶಿಸಿದೆ. ಅಷ್ಟು ಮಾತ್ರವಲ್ಲದೇ ಪರಿಹಾರವಾಗಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆತನ ಪತ್ನಿಯ ಬೇಡಿಕೆಯನ್ನು ತಿರಸ್ಕರಿಸಿದ್ದು ಆಕೆಯು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಮೊಕದ್ದಮೆ ವೆಚ್ಚವಾಗಿ 30 ಸಾವಿರ ರುಪಾಯಿ ಪಾವತಿಸುವಂತೆ ಆದೇಶ ಹೊರಡಿಸಿದೆ.
ಪತ್ನಿ ಮತ್ತು ಆಕೆಯ ಮಾಜಿ ಗೆಳೆಯನ ನಡುವೆ ಇನ್ನೂ ಸಂಬಂಧವಿದೆ. ಹಣಕಾಸಿನ ವಹಿವಾಟುಗಳ ನಡೆದಿವೆ. ಎಂದು ಅನುಮಾನಗೊಂಡ ಮೊದಲ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ, ಡಿಸೆಂಬರ್ 2018ರಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ಮದುವೆಯನ್ನು ಮುರಿದುಕೊಂಡಿದ್ದಾರೆ. ಹೀಗಿದ್ದರು ಅವರ ಸಂಬಂಧ ರಹಸ್ಯವಾಗಿ ಮುಂದುವರಿಸಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ತಾನು ಮಾಡಿದ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಸ್ವತಃ ಗೂಢಚರನಾಗಿ ಕೆಲಸ ಮಾಡಿದ್ದ ಪತಿಯು, ಕೆಲಸ ಹುಡುಕುತ್ತಿದ್ದ ಪತ್ನಿಯೊಂದಿಗೆ ಉದ್ಯೋಗದಾತನೆಂಬಂತೆ ಜೂಮ್ ಮೀಟಿಂಗ್ ಮಾಡಿದ್ದಾನೆ. ಪತ್ನಿಯ ಉದ್ಯೋಗ ಸಂದರ್ಶನ ನಡೆಸಿದ್ದಾನೆ. ಈ ವೇಳೆ ಆಕೆ ತನ್ನ ಮೊದಲ ಮದುವೆ ಮುರಿದುಕೊಂಡಿದ್ದರ ಬಗ್ಗೆ ಮಾತನಾಡಿದ್ದಾಳೆ. ಬಳಿಕ ನಾನೀಗ ಬೇರೊಬ್ಬರನ್ನು ಮದುವೆಯಾಗಿದ್ದೇನೆ ಅಂತಲೂ ಹೇಳಿದ್ದಾಳೆ. ಪತಿಯ ನಕಲಿ ಜೂಮ್ ಕರೆಯಲ್ಲಿ ಎಲ್ಲವನ್ನು ಆಕೆ ಬಹಿರಂಗಪಡಿಸಿದ್ದಾಳೆ.
ಅಷ್ಟಕ್ಕೆ ಬಿಡದ ಪತಿ ಇನ್ನಷ್ಟು ಮಾಹಿತಿ ಹೊರಗೆಳೆಯಲು
ಯತ್ನಿಸಿದ್ದಾನೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಹಾಕಿದ್ದಾರೆ. ಆಕೆಯ ಮೊದಲ ವಿವಾಹದ ದಾಖಲೆಗಳನ್ನು ಪಡೆದಿದ್ದಾನೆ. ಆಕೆ ಪಾನ್ ಕಾರ್ಡ್ ವಿವರ, ದಾಖಲೆಗಳು, ವಿಚ್ಛೇದನಕ್ಕೆ ಬೇಕಾದ ಎಲ್ಲ ದಾಖಲೆಗಳು, ಪತ್ನಿ ಹೆಸರು ಬದಲಾವಣೆ ಮಾಡಿಕೊಂಡಿದ್ದ ಅಫಿಡವಿಟ್ ಪ್ರತಿಗಳ ಮಾಹಿತಿ
ಪಡೆದುಕೊಂಡಿದ್ದು ಎಲ್ಲಾ ದಾಖಲೆಗಳನ್ನು ಪತಿ ಕೋಟ್೯ಗೆ ಸಲ್ಲಿಸಿದ್ದಾನೆ.
ವಿಚ್ಛೇದನ ಸಿಗುವ ಮೊದಲೇ ಎರಡನೇ ಮದುವೆ ಆಗಿದ್ದ ಪತ್ನಿಯು, ತನ್ನ ಪತಿ (ಅರ್ಜಿದಾರ) ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆಂದು ಆರೋಪಿಸಿದ್ದರು. ಜೊತೆಗೆ ಜೀವನಾಂಶ ಪರಿಹಾರವಾಗಿ 3 ಕೋಟಿ ರೂಪಾಯಿ ಹಾಗೂ ಮಾಸಿಕ ಜೀವನಾಂತ ಪ್ರತಿ ತಿಂಗಳು 60 ಸಾವಿರ ರು. ಬೇಡಿಕೆ ಇಟ್ಟಿದ್ದರು. ಕೋರ್ಟ್ ಆಕೆಯ ಬೇಡಿಕೆಯನ್ನು ವಜಾಗೊಳಿಸಿದ್ದು ಪತಿಯ ಇಚ್ಛೆಯಂತೆ ವಿಚ್ಚೇದನ ನೀಡಿದೆ.
ಪತಿ, ಪತ್ನಿ ಇಬ್ಬರು ಎಂಜಿನಿಯರಿಂಗ್ ವೃತ್ತಿಯಲ್ಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಕೆ.ಆರ್. ಪುರಂನಲ್ಲಿ ವಾಸಿಸುತ್ತಿದ್ದರು. ಪತಿ 2021 ರಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1) ಅಡಿಯಲ್ಲಿ ಕ್ರೌರ್ಯ, ಮಾನಸಿಕ ಕಿರುಕುಳ ಮತ್ತು ದ್ರೋಹ ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.