ನವದೆಹಲಿ: ಅತಿವೇಗ ಮತ್ತು ಅಜಾಗರೂಕ
ಚಾಲನೆಯಿಂದಾಗಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಮಾ ಕಂಪನಿಗಳು ಪರಿಹಾರವನ್ನು ಪಾವತಿಸಬೇಕಾಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಅತಿವೇಗದಿಂದ ಕಾರನ್ನು ಚಲಾಯಿಸಿದ ಪರಿಣಾಮ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪತ್ನಿ,ಮಗ ಹೆತ್ತವರು ಕೋರಿದ್ದ 80 ಲಕ್ಷ ರೂ.ಪರಿಹಾರವನ್ನು ಮಂಜೂರು ಮಾಡಲು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು ನಿರಾಕರಿಸಿದೆ.
ಮೃತ ವ್ಯಕ್ತಿಯ ಕುಟುಂಬಸ್ಥರು ಪರಿಹಾರವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಏನಿದು ಪ್ರಕರಣ?: 2014,ಜೂ.18ರಂದು ಎನ್.ಎಸ್. ರವೀಶ್ ಎನ್ನುವವರು ಕಾರನ್ನು ಸ್ವತಃ ಚಲಾಯಿಸಿಕೊಂಡು ಮಲ್ಲಸಂದ್ರ ಗ್ರಾಮದಿಂದ ಅರಸೀಕರೆ ಪಟ್ಟಣಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕಾರಿನಲ್ಲಿ ಅವರ ಸಹೋದರಿ ಮತ್ತು ಅವರ ಮಕ್ಕಳು ಪ್ರಯಾಣಿಸುತ್ತಿದ್ದರು.
ರವೀಶ ಸಂಚಾರ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯದಿಂದ ಕಾರನ್ನು ಚಲಾಯಿಸುತ್ತಿದ್ದರು ಮತ್ತು ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯಲ್ಲಿ ಪಲ್ಟಿಯಾಗಿತ್ತು ಎನ್ನುವುದು ತನಿಖೆಯಿಂದ ನ್ಯಾಯಾಲಯದ ಗಮನಕ್ಕೆ ಬಂದಿತ್ತು.
ಮೃತ ವ್ಯಕ್ತಿಯ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಸಂಭವಿಸಿತ್ತು ಮತ್ತು ಅವರು ತನ್ನದೇ ತಪ್ಪಿನಿಂದಾಗಿ ಸಾವನ್ನಪ್ಪಿದ್ದರು. ಹೀಗಾಗಿ ಅವರ ಸಾವಿಗಾಗಿ ಕುಟುಂಬಸ್ಥರು ಯಾವುದೇ ಪರಿಹಾರವನ್ನು ಕೋರುವಂತಿಲ್ಲ ಏಕೆಂದರೆ ಅದು ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿ ತನ್ನದೇ ತಪ್ಪುಗಳಿಗೆ ಪರಿಹಾರವನ್ನು ಪಡೆದಂತಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು.