ಬೆಂಗಳೂರು: ಇತ್ತೀಚೆಗೆ ಹೆಚ್ಚು ಹೃದಯಾಘಾತ ಪ್ರಕರಣಗಳು ಸಂಭವಿಸುತ್ತಿದ್ದು ಯುವವಕರೆ ಹೆಚ್ಚು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎಂಬ ಸಂಶಯಗಳಿಗೆ ತಜ್ಞರು ವರದಿ ನೀಡಿದ್ದಾರೆ.
ಹೃದಯಸ್ತಂಭನದಿಂದ ಸಾವು ಸಂಭವಿಸುವುದಕ್ಕೆ ಕೋವಿಡ್ ಮತ್ತು ಕೋವಿಡ್ ಲಸಿಕೆಗಳು ಕಾರಣ ಎಂಬುದಕ್ಕೆ ಪುರಾವೆಗಳಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ಕೆಲಸದ ಒತ್ತಡದ ಸಮಸ್ಯೆಗಳಿಂದ ಹೃದಯಾಘಾತದ ಅಪಾಯ ಹೆಚ್ಚಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಅಧ್ಯಕ್ಷತೆಯ ತಜ್ಞರ ಸಮಿತಿ ಹೇಳಿದೆ.
ಯುವಜನರು ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳಿಗೆ ಕೋವಿಡ್ ಹಾಗೂ ಲಸಿಕೆಯ ಅಡ್ಡ ಪರಿಣಾಮಗಳು ಕಾರಣವೇ ಎಂಬುದನ್ನು ಪತ್ತೆ ಮಾಡಲು ರಚಿಸಿದ್ದ ಈ ಸಮಿತಿಯ ಅಧ್ಯಯನ ವರದಿ ಸಿದ್ಧವಾಗಿದ್ದು, ರಾಜ್ಯ ಸರ್ಕಾರಕ್ಕೆ ಸೋಮವಾರ ವರದಿ ನೀಡಲಾಗಿದೆ.