ಪತಿ ತನ್ನ ಪತ್ನಿಯ ವಿರುದ್ಧ ಶೀಲಶಂಕಿಸಿ ಆರೋಪ ಮಾಡಿದ ಮಾತ್ರಕ್ಕೆ ಆತನ ಅಪ್ರಾಪ್ತ ಮಗುವಿಗೆ ಡಿಎನ್ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸುವಂತಿಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಮಗುವಿನ ಡಿಎನ್ಎ ಪರೀಕ್ಷೆಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ.ಜೋಶಿ ನೇತೃತ್ವದ ಪೀಠ, ಡಿಎನ್‌ಎ ಪರೀಕ್ಷೆಗೆ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಆದೇಶಿಸಲಾಗುತ್ತದೆ ಎಂದು ಹೇಳಿದೆ. ಪತ್ನಿಯ ವಿರುದ್ಧ ವ್ಯಭಿಚಾರದ ಆರೋಪವಿದ್ದರೆ, ಮಗುವನ್ನು ಪಿತೃತ್ವ ಪರೀಕ್ಷೆಗೆ ಒಳಪಡಿಸುವ ಬದಲು ಬೇರೆ ಯಾವುದೇ ಸಾಕ್ಷ್ಯಾಧಾರಗಳ ಮೂಲಕ ಅದನ್ನು ಸಾಬೀತುಪಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ವ್ಯಭಿಚಾರ ಆಧಾರದ ಮೇಲೆ ಪತಿ ವಿಚ್ಛೇದನಕ್ಕೆ ಅರ್ಹನೆಂದು ಹೇಳಿಕೊಂಡ ಮಾತ್ರಕ್ಕೆ ಡಿಎನ್ಎ ಪರೀಕ್ಷೆಗೆ ನಿರ್ದೇಶನ ನೀಡುವ ಆದೇಶವನ್ನು ಅಂಗೀಕರಿಸಲು ಆಗುವುದಿಲ್ಲ. ಡಿಎನ್ಎ ಪರೀಕ್ಷೆಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲು ಇದು ಒಂದು ಅಸಾಧಾರಣ ಪ್ರಕರಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮಗುವಿನ ಹಿತಾಸಕ್ತಿಯನ್ನು ಪರಿಗಣಿಸದೆ ಕೌಟುಂಬಿಕ ನ್ಯಾಯಾಲಯವು ಇಂತಹ ಆದೇಶ ನೀಡಿರುವುದು ಸಮಂಜಸವಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದಿದ್ದಾಗ, ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಮಗುವನ್ನು ರಕ್ತ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ: 2020ರ ಫೆಬ್ರುವರಿಯಲ್ಲಿ ಕೌಟುಂಬಿಕ ನ್ಯಾಯಾಲಯವು ಮಗುವಿನ ತಂದೆ ಯಾರು ಎಂದು ನಿರ್ಧರಿಸಲು ಮಗುವಿಗೆ ಡಿಎನ್ಎ ಪರೀಕ್ಷೆ ನಡೆಸಲು ನಿರ್ದೇಶಿಸಿದ್ದ ಆದೇಶವನ್ನು ಪ್ರಶ್ನಿಸಿ, ಪತ್ನಿ ಮತ್ತು ಆಕೆಯ 12 ವರ್ಷದ ಮಗ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. 2011ರಲ್ಲಿ ವಿವಾಹವಾಗಿದ್ದ ದಂಪತಿಯು 2013ರ ಜನವರಿಯಲ್ಲಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಆಗ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದರು.