ಬೆಂಗಳೂರು: ನಗರದಲ್ಲಿ ಒಂದೇ ಟ್ರಸ್ಟ್‌ನಡಿ ಬರುವ 15 ಶಾಲೆಗಳಲ್ಲಿ ಆರ್‌ಟಿಇ ಸೀಟುಗಳಿಗೆ ಮಕ್ಕಳು ದಾಖಲಾಗದಿದ್ದರೂ ಸುಳ್ಳು ಲೆಕ್ಕ ತೋರಿಸಿ ಅಕ್ರಮ ಎಸಗಿ ಸರ್ಕಾರದಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿದ್ದು ವಿಧಾನ ಪರಿಷತ್ ನಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಭಾಗಿಯಾಗಿರುವ ಇತರೆ ಅಧಿಕಾರಿಗಳು ಹಾಗೂ ಶಾಲೆಯವರ ವಿರುದ್ಧ ಕ್ರಮ ವಹಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಗೋವಿಂದರಾಜು ಅವರು ಕೇಳಿರುವ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇದ್ದರೂ ಕೇವಲ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೋರಿಸಿ ಖಾಸಗಿ ಶಾಲಾ ಸಂಸ್ಥೆಗಳು ಶಿಕ್ಷಣ ಇಲಾಖೆಯಿಂದ ಹಣ ಪಡೆದಿರುವ ಪ್ರಕರಣ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ನಡೆದಿರುವುದು ಇಲಾಖಾ ಗಮನಕ್ಕೆ ಬಂದಿದೆ. ಬೆಂಗಳೂರು ಉತ್ತರ ವಲಯ ವ್ಯಾಪ್ತಿಯ ಅಗ್ರಹಾರ ಲೇಔಟ್, ಮಾರುತಿ ನಗರ, ಹೆಗಡೆ ನಗರ, ಕಟ್ಟಿಗೆಹಳ್ಳಿ ಸೇರಿದಂತೆ ವಿವಿಧೆಡೆ ಇರುವ ಜಿ. ಕೆ.ನಾಯ್ಡು ಶಾಲೆಯ 15 ಶಾಖೆಗಳಲ್ಲಿ ಇಂತಹ ಪ್ರಕರಣ ಕಂಡು ಬಂದಿದೆ.
ಈ ಸಂಬಂಧ ವಲಯದ ಡಿಡಿಪಿಐ ಮತ್ತು ಬಿಇಒ ಶಾಲೆಗೆ ನೋಟಿಸ್ ನೀಡಿ ಹೆಚ್ಚುವರಿಯಾಗಿ ಪಾವತಿಸಲಾಗಿರುವ ಅನುದಾನವನ್ನು ಹಿಂಪಡೆಯಲು ಕ್ರಮ ವಹಿಸಿರುತ್ತಾರೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ಪ್ರಾರಂಭಿಸಲಾಗಿದ್ದು, ಈ ವಲಯದ ಶಿಕ್ಷಣ ಸಂಯೋಜಕ ಹಾಗೂ ಆರ್ ಟಿಇ ನೋಡಲ್ ಅಧಿಕಾರಿ ಜಗದೀಶ್ ಎಂಬುವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.