ಸುದ್ದಿ

‘ಹೋಗಿ ಸಾಯಿ’ ಎಂಬ ಮಾತು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗಲ್ಲ; ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Share It

ಬೆಂಗಳೂರು: ದಂಪತಿ ನಡುವಿನ ಜಗಳದಲ್ಲಿ ಸಿಟ್ಟಿನಿಂದ ‘ಹೋಗಿ ಸಾಯಿ’ ಎಂದು ಹೇಳಿರುವ ಮಾತು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಆಗದು ಎಂದಿರುವ ಹೈಕೋರ್ಟ್, ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಪತ್ನಿ ವಿರುದ್ಧ ದಾಖಲಾಗಿದ್ದ ಪ್ರಕರಣ ವನ್ನು ರದ್ದುಗೊಳಿಸಿ ಆದೇಶಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆ‌ರ್ ರದ್ದುಗೊಳಿಸುವಂತೆ ಕೋರಿ ಹುಬ್ಬಳ್ಳಿ ಮೂಲದ ಫಿಬಿ ಗೌತಮ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್‌. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಈ ಮೇಲಿನಂತೆ ಆದೇಶ ನೀಡಿದೆ.

ದಾಖಲೆ ಪರಿಶೀಲಿಸಿದ ನ್ಯಾಯಪೀಠ ಮೃತ ವ್ಯಕ್ತಿ ಬರೆದಿರುವ ಡೆತ್‌ನೋಟ್‌ನಲ್ಲಿ ಅರ್ಜಿದಾರರು ತಮಗೆ ಆತ್ಮಹತ್ಯೆಗೊಳಗಾಗುವಂತೆ ನಿರ್ಧಿಷ್ಟವಾಗಿ ಸೂಚಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಪತ್ನಿ ತನ್ನ ಸಾವಿನ ನಿರೀಕ್ಷೆಯಲ್ಲಿದ್ದಾಳೆ ಎಂದಷ್ಟೇ ಆತ ಉಲ್ಲೇಖಿಸಿದ್ದ. ಕಾನೂನಿನ ಅನ್ವಯ ಇದನ್ನು ಪ್ರಚೋದನೆ ನೀಡಿದಂತೆ ಎಂದು ವ್ಯಾಖ್ಯಾನಿಸಲಾಗದು. ದುಃಖದಲ್ಲಿ ಓರ್ವ ವ್ಯಕ್ತಿ ನೀಡಿರುವ ಹೇಳಿಕೆಯನ್ನು ಪರಿಗಣಿಸಿ ಆತ್ಮಹತ್ಯೆಗೆ ಪ್ರಚೋದನೆ ಕಾಯ್ದೆ 108ರ ಅಡಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಅಲ್ಲದೆ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಲು ಸೂಕ್ತ ಸಾಕ್ಷಾಧಾರಗಳು ಬೇಕು. ಕಾಯ್ದೆ ಅನುಸಾರ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲು ಆತ ಅಥವಾ ಆಕೆ ಆತ್ಮಹತ್ಯೆಗೊಳಗಾದ ವ್ಯಕ್ತಿಯನ್ನು ನಿರ್ದಿಷ್ಟ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಬೇಕು ಆದರೆ ಈ ಪ್ರಕರಣದಲ್ಲಿ ಎರಡು ಅಂಶಗಳು ಲಭ್ಯವಿಲ್ಲ. ಕೇವಲ ‘ಹೋಗಿ ಸಾಯಿ’ ಎಂಬ ಒಂದೇ ವಾಕ್ಯದಿಂದ ವ್ಯಕ್ತಿ ತನ್ನ ಪ್ರಾಣ ತ್ಯಜಿಸಿದ್ದಾನೆ ಎನ್ನುವುದು ಒಪ್ಪಲಾಗದು ಪೀಠ ಹೇಳಿದೆ.

ಏನಿದು ಪ್ರಕರಣ?: ಅರ್ಜಿದಾರೆ ಮತ್ತು ಮೃತ ವ್ಯಕ್ತಿ 2022ರ ಡಿ.8ರಂದು ವೈವಾಹಿಕ ವಿವಾಹವಾಗಿದ್ದರು. ಆದರೆ ಫಿಬಿ ಗೌತಮ್ ಕೇವಲ ಮೂರು ತಿಂಗಳು ಪತಿಯ ಜತೆಗೆ ಸಂಸಾರ ನಡೆಸಿದ್ದು, ಬಳಿಕ ತವರು ಮನೆಗೆ ಬಂದಿದ್ದಳು. ಎರಡು ಕುಟುಂಬಗಳು ಪತಿಯೊಂದಿಗೆ ನೆಲೆಸುವಂತೆ ಅರ್ಜಿದಾರಳನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ದರೂ ಆಕೆ ತೆರಳಿರಲಿಲ್ಲ. ಇದಾದ ಬಳಿಕ ಪತಿಯೂ ವೈವಾಹಿಕ ಹಕ್ಕುಗಳ ಮರುಸ್ಥಾಪನೆ’ಗಾಗಿ ಕೌಟುಂಬಿಕ ನ್ಯಾಯಾಲಯದ ಕದ ತಟ್ಟಿದ್ದ. ಇದಾದ ಬಳಿಕ ಮಹಿಳೆಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ರಕ್ಷಣೆ ಕಾಯ್ದೆಯಡಿ ಪತಿಯ ಕುಟುಂಬ ಮತ್ತು ಆತನ ವಿರುದ್ಧ ದಾವೆ ಹೂಡಿದ್ದರು. ಇದರ ಮಧ್ಯೆ ಜ. 26ರಂದು ಬೆಳಗ್ಗೆ ಪತಿಯೂ ನೇಣಿಗೆ ಶರಣಾಗಿದ್ದ. ತದನಂತರ ಅದೇ ಜಾಗದಲ್ಲಿ ಆತ ಬರೆದಿರುವ ಡೆತ್‌ನೋಟ್ ಸಿಕ್ಕಿತ್ತು. ಇದರ ಬೆನ್ನೆಲ್ಲೇ ಅರ್ಜಿದಾರರ ವಿರುದ್ಧ ಮೃತನ ಸಹೋದರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ಹುಬ್ಬಳ್ಳಿ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.


Share It

You cannot copy content of this page