ಸುದ್ದಿ

ರೈಲಿನಿಂದ ಬಿದ್ದು ಸಾವು: ₹8 ಲಕ್ಷ ವಿಮೆ ಹಣ ಪಾವತಿಸಲು ನೈಋತ್ಯ ರೈಲ್ವೆಗೆ ಆದೇಶ

Share It

ಧಾರವಾಡ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹8 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ನೈಋತ್ಯ ರೈಲ್ವೆಗೆ ಆದೇಶಿಸಿದೆ.

ಹುಬ್ಬಳ್ಳಿಯ ಕೇಶವ ನಗರ ನಿವಾಸಿ ಸುಧೀಂದ್ರ ಎಂಬುವರು ಪತ್ನಿ ಕೀರ್ತಿವತಿ ಅವರೊಂದಿಗೆ  2023ರ ಫೆ. 4ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರಾತ್ರಿ ಸುಧೀಂದ್ರ ಅವರು ರೈಲಿನಲ್ಲಿದ್ದ ಶೌಚಗೃಹಕ್ಕೆ ಹೋದಾಗ ಬೋಗಿಯ ಬಾಗಿಲು ತೆರೆದಿದ್ದ ಕಾರಣ ಆಯತಪ್ಪಿ ಬಿದ್ದು ಮೃತಪಟ್ಟಿದ್ದರು. ರಿಸರ್ವ್ ಕ್ಲಾಸ್‌ಗೆ ಹಣ ಪಡೆದು ಬೋಗಿಯಲ್ಲಿ ಗಾರ್ಡ್ ಇರದೆ, ಬಾಗಿಲನ್ನು ಮುಚ್ಚದಿರುವ ಕಾರಣ ಅವಘಡ ನಡೆದಿದೆ ಎಂದು ದೂರುದಾರರು ರೈಲ್ವೆ ಇಲಾಖೆ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆದರೆ, ದುರ್ಘಟನೆಯಿಂದ ಮೃತಪಟ್ಟರೆ ಇಲಾಖೆಯಿಂದ ₹ 8 ಲಕ್ಷ ರೂ. ಪಡೆಯಲು ರೈಲ್ವೆ ಟ್ರಿಬ್ಯುನಲ್‌ನಲ್ಲಿ ದಾವೆ ಹೂಡಬೇಕು. ಗ್ರಾಹಕರ ಆಯೋಗದಲ್ಲಿ ವಿಮೆ ಕೇಳಲು ಅರ್ಹರಲ್ಲ ಎಂದು ಇಲಾಖೆ ನಿರಾಕರಿಸಿತ್ತು. ಇದರಿಂದ ನೊಂದ ಮೃತ ಸುಧೀಂದ್ರ ಅವರ ಪತ್ನಿ ಕೀರ್ತಿವತಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ವಿಮಾ ಹಣವನ್ನು ರೈಲ್ವೆ ಟ್ರಿಬ್ಯುನಲ್‌ನಲ್ಲಿ ಪಡೆಯಬೇಕು. ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪರಿಹಾರ ಹಣ ನೀಡಲು ನಿರಾಕರಿಸಿರುವುದು ಸರಿಯಲ್ಲ. ಪ್ರಕರಣ ಗ್ರಾಹಕರ ಪರಿಹಾರ ಅಯೋಗದ ವ್ಯಾಪ್ತಿಗೆ ಬರುತ್ತದೆ. ಎದುರುದಾರರಿಗೆ 1 ತಿಂಗಳೊಳಗೆ 8 ಲಕ್ಷ ರೂ. ಪಾವತಿಸಬೇಕು. ಜತೆಗೆ ಪ್ರಕರಣದ ವೆಚ್ಚ 10,000 ರೂ. ಕೊಡಬೇಕು ಎಂದು ನೈಋತ್ಯ ರೈಲ್ವೆಗೆ ನಿರ್ದೇಶಿಸಿ ತೀರ್ಪು ನೀಡಿದ್ದಾರೆ.


Share It

You cannot copy content of this page