ಬೆಂಗಳೂರು: ದಾವಣಗೆರೆ ಜಿಲ್ಲೆ ಹರಿಹರ
ತಾಲೂಕಿನ ಮಲೆಬೆನ್ನೂರಿನ ಸರ್ಕಾರಿ ಶಾಲೆಯ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸ್ಥಳೀಯ ನಿವಾಸಿಗಳಾದ ಹೆಚ್.ಸುರೇಶ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದೆ. ಅರ್ಜಿಯನ್ನು ಪರಿಗಣಿಸುವಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸದ್ಯ ಶಾಲಾ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ ಮತ್ತು ಶಾಲೆಯಲ್ಲಿ ಕೇವಲ 12 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು, ಅವರನ್ನು ಬೇರೆ ಶಾಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಸರ್ಕಾರಿ ವಕೀಲರು ನ್ಯಾಯಲಕ್ಕೆ ವಿವರಿಸಿದರು.
ಒಂದು ಎಕರೆ 33 ಗುಂಟೆ ಜಾಗದಲ್ಲಿ ಕೇವಲ 60*60 ಜಾಗವನ್ನು ಮಾತ್ರ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಊಟ – ತಿಂಡಿ ಒದಗಿಸಲು ಕ್ಯಾಂಟೀನ್‌ಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಹಾಗಾಗಿ ಈ ಅರ್ಜಿ ಪುರಸ್ಕರಿಸಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.