ಬೆಂಗಳೂರು: ₹10 ಲಕ್ಷ ಲಂಚಕ್ಕೆ ಬೇಡಿಕೆ ಹಾಗೂ ಅವಧಿ ಮೀರಿ ಪಬ್ ಗೆ ಅನುಮತಿ ಕೊಟ್ಟ ಆರೋಪದಲ್ಲಿ ಇಬ್ಬರು ಇನ್ಸ್‌ಪೆಕ್ಟರ್ ಸೇರಿ 6 ಪೊಲೀಸರನ್ನು ಅಮಾನತು ಮಾಡಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲಸೂರು ಗೇಟ್ ಠಾಣೆಯ ಇನ್ಸ್‌ಪೆಕ್ಟರ್ ಹನುಮಂತ ಕೆ ಭಜಂತ್ರಿ ಹಾಗೂ ಕೋರಮಂಗಲ ಠಾಣೆಯ ಇನ್ಸ್‌ಪೆಕ್ಟರ್ ರಾಮರೆಡ್ಡಿ ಸೇರಿದಂತೆ 6 ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಆದೇಶ ಮಾಡಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಚಿನ್ನಾಭರಣ ಉದ್ಯಮಿ ಬಳಿ
10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಿದಾಗ ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಹನುಮಂತ ಕೆ ಭಜಂತ್ರಿ, ಓರ್ವ ಎಎಸ್‌ಐ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕೋರಮಂಗಲ ವ್ಯಾಪ್ತಿಯಲ್ಲಿ ಅವಧಿಗೂ ಮೀರಿ ಪಬ್ ಮತ್ತು ಬಾರ್ ತೆರೆದಿದ್ದರೂ ಕ್ರಮಕೈಗೊಳ್ಳದ ಕೋರಮಂಗಲ ಇನ್‌ಸ್ಪೆಕ್ಟರ್ ರಾಮರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ.