ಸುದ್ದಿ

ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಹಲ್ಲೆ; ಮೂವರು ಪೊಲೀಸರು ಸಸ್ಪೆಂಡ್; ಪಿಎಸ್ಐ ಗೆ ನೋಟಿಸ್

Share It

ಬೆಂಗಳೂರು: ಕಳ್ಳತನ ಆರೋಪದಡಿ ವಿಚಾರಣೆ ನೆಪದಲ್ಲಿ ಮನೆಗೆಲಸದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆತಂದು ಗಂಭೀರವಾಗಿ ಹಲ್ಲೆ ಮಾಡಿದ ಆರೋಪದಡಿ ವರ್ತೂರು ಪೊಲೀಸ್ ಠಾಣೆಯ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಅಲ್ಲದೆ, ಮೇಲ್ವಿಚಾರಣೆ ನಡೆಸುವಲ್ಲಿ ವಿಫಲರಾದ ಪಿಎಸ್‌ಐ ಮೌನೇಶ್ ದೊಡ್ಡಮನಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ವರ್ತೂರು ಪೊಲೀಸ್ ಠಾಣೆಸಿಬ್ಬಂದಿಯಾದ ಸಂಜಯ್ ರಾಥೋಡ್, ಸಂತೋಷ್ ಕುದರಿ ಹಾಗೂ ಅರ್ಚನಾ ಅಮಾನತುಗೊಂಡವರು. ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ ನೀಡಿದ ವರದಿ ಆಧರಿಸಿ ಈ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಅದೇಶಿಸಿದ್ದಾರೆ.

ಇನ್ನೂ ಈ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಡಿಸಿಪಿಗೆ ಪತ್ರ ಬರೆದಿದ್ದರು.

ಏನಿದು ಪ್ರಕರಣ?: ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ ಮೆಂಟ್ ನಿವಾಸಿ ಪ್ರಿಯಾಂಕ ಜನ್ವಾಲ್ ಅ.30ರಂದು ತಮ್ಮ ಮನೆಯಲ್ಲಿ ಡೈಮೆಂಡ್ ರಿಂಗ್ ಕಳ್ಳತನವಾಗಿರುವ ಬಗ್ಗೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿ ಕೆಲಸ ಮಾಡುವ ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ(34) ಎಂಬಾಕೆಯೇ ಡೈಮಂಡ್ ರಿಂಗ್ ಕಳವು ಮಾಡಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಗಳಾದ ಸಂಜಯ್ ರಾಥೋಡ್, ಸಂತೋಷ್ ಕುದರಿ ಹಾಗೂ ಅರ್ಚನಾ ಇವರುಗಳು ಆರೋಪಿ ಮಹಿಳೆ ಸುಂದರಿ ಬೀಬಿ ಅವರನ್ನು ಠಾಣೆಗೆ ಕರೆಸಿ ಹಲ್ಲೆನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯಕೀಯ ವರದಿಯಲ್ಲಿ ಪೊಲೀಸರು ಮಹಿಳೆಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವುದು ಸಾಬೀತಾಗಿತ್ತು.


Share It

You cannot copy content of this page