ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಯನ್ನು ಒಂದು ಕೋರ್ಟ್ ನಿಂದ ಮತ್ತೊಂದು ಕೋರ್ಟ್ ಗೆ ಆರೋಪಿಯ ಕೋರಿಕೆ ಮೇರೆಗೆ ವರ್ಗಾಯಿಸಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಇದೇ ಜೂನ್ 24ರಂದು ಆದೇಶಿಸಿದೆ.
ಆರ್.ಬಿ.ಎಲ್ ಬ್ಯಾಂಕ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಬೇರೊಂದು (ತಮಗೆ ಅನುಕೂಲವಾಗುವ ಪ್ರದೇಶದಲ್ಲಿರುವ) ಕೋರ್ಟ್ ಗೆ ವರ್ಗಾವಣೆ ಮಾಡುವಂತೆ ಕೋರಿ ಕಸ್ತೂರಿ ಪಾಂಡಿಯನ್ ಎಸ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 138 ರ ಅಡಿಯಲ್ಲಿ ದಾಖಲಿಸಿರುವ ಚೆಕ್ ಬೌನ್ಸ್ ಅಪರಾಧದ ಪ್ರಕರಣವನ್ನು ಆರೋಪಿಯ ಕೋರಿಕೆ ಮೇರೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಅರ್ಜಿದಾರರು (ಆರೋಪಿ) ಪ್ರಕರಣದ ವಿಚಾರಣೆಯಲ್ಲಿ ಖುದ್ದು ಹಾಜರಿಯಿಂದ ವಿನಾಯ್ತಿ ನೀಡುವಂತೆ ಕೋರಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮನವಿ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಇನ್ನು ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ, ಇಂತಹ ಹಲವು ಅರ್ಜಿಗಳನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಆರೋಪಿ ಕೋರಿಕೆ ಪರಿಗಣಿಸಿ ಇಂತಹ ಅರ್ಜಿಗಳನ್ನು ವರ್ಗಾಯಿಸುವಂತೆ ಆದೇಶಿಸಲಾಗದು ಎಂದು ಸುಪ್ರೀಂಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
Transfer Petition(s)(Criminal) No(s). 515/2024
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.