ಸುದ್ದಿ

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲ್ಲ; ಹೈಕೋರ್ಟ್‌ನಲ್ಲಿ ಸರ್ಕಾರದ ವಾದ

Share It

ಬೆಂಗಳೂರು: ವಾಹನ ಕಾಯ್ದೆಯಲ್ಲಿ ಬೈಕ್ ಟ್ಯಾಕ್ಸಿಯನ್ನು ಸಾರಿಗೆ ವಾಹನ ಎಂದು ಪರಿಗಣಿಸದಿರುವ ಕಾರಣ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ ಮಂಡಿಸಿದೆ.

ಬೈಕ್ ಟ್ಯಾಕ್ಸಿ ಸಂಚಾರಕ್ಕೆ ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸುವ ತನಕ ಬೈಕ್‌ ಟ್ಯಾಕ್ಸಿ ಸೇವೆ ನಿಷೇಧಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಉಬ‌ರ್ ಸೇರಿದಂತೆ ವಿವಿಧ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಭು ಬಬ್ರು ಮತ್ತು ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಾಹನ ಕಾಯ್ದೆಯ ಪ್ರಕಾರ ಮೋಟಾರ್ ಸೈಕಲ್‌ಗಳನ್ನು ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಬಳಸಲು ಅನುಮತಿ ನೀಡುವುದಿಲ್ಲ. ಮೋಟಾ‌ರ್ ಸೈಕಲ್‌ಗಳನ್ನು ಮೋಟಾ‌ರ್ ಕ್ಯಾಬ್‌ಗಳ ವ್ಯಾಪ್ತಿಯಲ್ಲಿ ತರಲು ಸಾದ್ಯವಿಲ್ಲ ಎಂದು ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ತಿಳಿಸಿದರು.

ಮೋಟಾರ್ ಸೈಕಲ್ ಗಳನ್ನು ಸಾರಿಗೆಗೆ ಬಳಸಲು ಸಾಧ್ಯವಿಲ್ಲ ಎಂದಾದರೆ, ಇ.ವಿ. ಬೈಕ್ ಗಳಿಗೆ ಅನುಮತಿ ನೀಡಿ ಸರ್ಕಾರ ಹೇಗೆ ಆದೇಶ ಹೊರಡಿಸಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರವು ಆ ಆದೇಶ ಹಿಂಪಡೆದಿದ್ದು, ತಪ್ಪನ್ನು ಸರಿಪಡಿಸಿಕೊಂಡಿದೆ. ಅಲ್ಲದೆ, ಜೀವನೋಪಾಯಕ್ಕೆ ಬೈಕ್ ಬಳಸುವುದನ್ನು ನಿಷೇಧಿಸಿಲ್ಲ. ಗಿಗ್ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ ಎಂದು ಅಡ್ವಕೇಟ್ ಜನರಲ್ ಪೀಠಕ್ಕೆ ತಿಳಿಸಿದರು. ನ್ಯಾಯಾಲಯ 24ಕ್ಕೆ ವಿಚಾರಣೆ ಮುಂದಿನ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಕಂಪನಿಗಳು ಹಳದಿ ಬೋರ್ಡ್ ನೋಂದಣಿ ಮಾಡಲು ಮತ್ತು ಪರವಾನಗಿ ಪಡೆದು ಸೇವೆ ನೀಡಲು ಸಿದ್ಧರಿದ್ದೇವೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ವಿವಿಧ ಕಾರಣಗಳನ್ನು ಪರಿಗಣಿಸಿ ಅನುಮತಿ ನೀಡದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು. ಈ ಹಿಂದೆ ಇ.ವಿ. ಬೈಕ್‌ಗಳಿಗೆ ಅನುಮತಿ ನೀಡಿದ್ದಾಗ ಅಗ್ರಿಗೇಟರ್‌ಗಳು ಒಂದೇ ಒಂದು ಅರ್ಜಿ ಸಲ್ಲಿಸಿರಲಿಲ್ಲ ಎಂದು ಎಜಿ ನ್ಯಾಯಾಲಯದ ಗಮನಕ್ಕೆ ತಂದರು.


Share It

You cannot copy content of this page