ಉತ್ತರ ಕನ್ನಡ: ಮಹಿಳೆಯ ಜೊತೆಗಿನ ಅನೈತಿಕ ಸಂಬಂಧದ ವಿಚಾರಕ್ಕೆ ಗಲಾಟೆ ನಡೆದಿದ್ದು, ಗಲಾಟೆಯನ್ನು ಬಿಡಿಸಲು ಹೋದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸೇರಿ ಮೂವರನ್ನು ಉತ್ತರ ಕನ್ನಡದ ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ.
ವಸಂತ್ ನಾಯ್ಕ (41) ಕೊಲೆಯಾದ ವ್ಯಕ್ತಿ. ಘಟನೆಯಲ್ಲಿ ಮೃತನ ಸಹೋದರ ಮಹೇಶ್ ಹಾಗೂ ನೆರೆಮನೆಯ ಕುಮಾರ್ ಎಂಬುವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಹೊಂದಿದ ಆರೋಪವಿದೆ. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಲೆ ಮಾಡಲು ಹೆಂಡ್ತಿ ಸ್ಕೆಚ್ ಹಾಕಿದ್ದಳಂತೆ. ಆದ್ರೆ ಹಂತಕರ ಪ್ಲಾನ್ ಜಸ್ಟ್ ಮಿಸ್ ಆಗಿದೆ. ದುರಾದೃಷ್ಟ ಎನ್ನುವಂತೆ ತಮ್ಮನನ್ನು ಪಾರು ಮಾಡಲು ಹೋದ ಅಣ್ಣನೇ ಕೊಲೆಯಾಗಿದ್ದಾನೆ.
ಘಟನೆಯ ಹಿನ್ನೆಲೆ: ಆರೋಪಿ ಸುಚಿತ್ರಾ ತನ್ನ ಪತಿ ಮಹೇಶ್‌ನಿಂದ ಬೇರ್ಪಟ್ಟು ಶಿವಮೊಗ್ಗದಲ್ಲಿ ವಾಸವಿದ್ದರು. ಅಲ್ಲಿನ ಜ್ಯೋತಿಷಿ ಕಮಲಾಕರ್ ಭಟ್ ಎಂಬುವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಚಿತ್ರಾ, ಅವರ ಮನೆಯಲ್ಲಿಯೇ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ ತಾಯಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಜೊತೆಗಿದ್ದರು. ಈ ವಿಚಾರವಾಗಿ ತಾಯಿ ಮತ್ತು ಜ್ಯೋತಿಷಿ ಸೇರಿ ಮಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ಈ ಕಿರುಕುಳದಿಂದ ಬೇಸತ್ತ ಮಗಳು, ತಾಯಿಗೆ ತಿಳಿಸದೆ ಸಿದ್ದಾಪುರದಲ್ಲಿದ್ದ ತಂದೆ ಮಹೇಶ್‌ಗೆ ಕರೆ ಮಾಡಿ ಚಿಕ್ಕಪ್ಪ ವಸಂತ್ ನಾಯ್ಕ ಅವರ ಮನೆಗೆ ಬಂದು ಆಶ್ರಯ ಪಡೆದಿದ್ದಳು ಎಂದು ಎಸ್‌ಪಿ ದೀಪನ್ ಮಾಹಿತಿ ನೀಡಿದ್ದಾರೆ.
ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್‌ನ ಕಾರಿನಲ್ಲಿ ಕೆಲ ಯುವಕರ ಗುಂಪಿನೊಂದಿಗೆ ಅವರಗುಪ್ಪದ ವಸಂತ್ ನಾಯ್ಕ್ ಮನೆಗೆ ಬಂದಿದ್ದರು. ಈ ವೇಳೆ ಸುಚಿತ್ರಾ ಹಾಗೂ ಅವರ ಪತಿ ಮಹೇಶ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಲಾಟೆಯ ಸಂದರ್ಭದಲ್ಲಿ ಜ್ಯೋತಿಷಿಯ ಕಾರು ಜಖಂ ಆಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಸುಚಿತ್ರಾ ಜೊತೆ ಬಂದಿದ್ದ ಯುವಕರು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಜಗಳ ಬಿಡಿಸಲು ಬಂದ ವಸಂತ್ ಅವರಿಗೆ ಗಂಭೀರವಾಗಿ ಇರಿಯಲಾಗಿದ್ದು, ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ವಸಂತ್ ನಾಯ್ಕ್ ಅತ್ತಿಗೆ ಸಂಧ್ಯಾ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಲೆ ಆರೋಪಿಗಳಾದ ಸುಚಿತ್ರಾ, ಲೋಕನಾಥ್ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.