ಸುದ್ದಿ

ವಿನಾಕಾರಣ ಠಾಣೆಯಲ್ಲಿ ಕೂರಿಸುವುದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ; ಪೊಲೀಸರಿಗೆ ಹೈಕೋರ್ಟ್ ತರಾಟೆ

Share It

​ಬೆಂಗಳೂರು: ಕಾನೂನು ಬದ್ಧ ಪ್ರಕ್ರಿಯೆ ಪಾಲಿಸದೆ ವಿನಾಕಾರಣ  ನಾಗರಿಕರನ್ನು ಪೊಲೀಸ್ ಠಾಣೆಗೆ ಕರೆಸುವುದು ಮತ್ತು ಗಂಟೆಗಟ್ಟಲೆ ಕೂರಿಸುವುದು ಸ್ಪಷ್ಟವಾಗಿ ಅಧಿಕಾರದ ದುರುಪಯೋಗ ಎಂದು ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

​ಶೇಷಾದ್ರಿಪುರದ ಎನ್. ಮಂಜುನಾಥ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠವು, ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

​ಪ್ರಕರಣದ ಹಿನ್ನೆಲೆ: ​ಅರ್ಜಿದಾರ ಮಂಜುನಾಥ್ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಶೇಷಾದ್ರಿಪುರಂ ಪೊಲೀಸರು ಪದೇ ಪದೇ ಅವರನ್ನು ಬಲವಂತವಾಗಿ ಠಾಣೆಗೆ ಕರೆದೊಯ್ಯುತ್ತಿದ್ದರು. ದಿನವಿಡೀ ಠಾಣೆಯಲ್ಲಿ ಕೂರಿಸುವ ಮೂಲಕ ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿವರಣೆ ನೀಡುವಂತೆ ಈ ಹಿಂದೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

​ವಿಚಾರಣೆ ವೇಳೆ ಪೊಲೀಸರು “ಅರ್ಜಿದಾರರ ಜೀವಕ್ಕೆ ಬೆದರಿಕೆ ಇತ್ತು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ಅವರನ್ನು ಠಾಣೆಗೆ ಕರೆಸಲಾಗಿತ್ತು” ಎಂದು ಪೊಲೀಸರು  ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಈ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಒಬ್ಬ ವ್ಯಕ್ತಿಯ ಜೀವಕ್ಕೆ ಬೆದರಿಕೆ ಇದ್ದರೆ ಅವರಿಗೆ ಸೂಕ್ತ ಭದ್ರತೆ ನೀಡಬೇಕೇ ಹೊರತು, ಠಾಣೆಯಲ್ಲಿ ಕೂರಿಸುವುದು ಸರಿಯಲ್ಲ ಎಂದಿದೆ.


Share It

You cannot copy content of this page