ಸುದ್ದಿ

ಪತ್ನಿ ಉದ್ಯೋಗದಲ್ಲಿದ್ದು, ಪತಿ ನಿರುದ್ಯೋಗಿಯಾಗಿದ್ದರೆ ಜೀವನಾಂಶ ಹೆಚ್ಚಳ ಅಸಾಧ್ಯ: ಹೈಕೋರ್ಟ್

Share It

ಬೆಂಗಳೂರು: ಪತ್ನಿಯು ಉತ್ತಮ ವೇತನ ಪಡೆಯುವ ಉದ್ಯೋಗದಲ್ಲಿದ್ದು, ಪತಿ ನಿರುದ್ಯೋಗಿಯಾಗಿರುವ ಸಂದರ್ಭದಲ್ಲಿ ಜೀವನಾಂಶದ ಮೊತ್ತವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

​ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಮಾಸಿಕ ₹9,000 ಜೀವನಾಂಶವನ್ನು ರದ್ದುಪಡಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ಹಾಗೂ ಈ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ಪ್ರಕಟಿಸಿದೆ.

ಪತ್ನಿಯು ಪ್ರಸ್ತುತ ಮಾಸಿಕ ₹1.5 ಲಕ್ಷ ವೇತನ ಪಡೆಯುತ್ತಿದ್ದು, ಆರ್ಥಿಕವಾಗಿ ಸಬಲರಾಗಿದ್ದಾರೆ. ವ್ಯಾಜ್ಯದ ವೆಚ್ಚವನ್ನು ಭರಿಸುವ ಸಾಮರ್ಥ್ಯವೂ ಅವರಿಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
​ಪತಿಯು ನಡೆಸುತ್ತಿದ್ದ ಶಾಲೆಯು ಸದ್ಯ ಮುಚ್ಚಲ್ಪಟ್ಟಿದ್ದು, ಅವರು ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜೀವನಾಂಶ ಹೆಚ್ಚಿಸುವುದು ತರ್ಕಬದ್ಧವಲ್ಲ ಎಂದು ಪೀಠ ತಿಳಿಸಿದೆ.

ಪತಿಗೆ ಹಂಚಿಕೆಯಾಗಬೇಕಿರುವ ಪೂರ್ವಜರ ಆಸ್ತಿ ಇನ್ನೂ ಅಂತಿಮವಾಗಿಲ್ಲ. ಅಲ್ಲದೆ, ತನಗಿರುವ ಒಂದು ಎಕರೆ ಜಮೀನನ್ನು ಎರಡು ಬಾರಿ ಅಡವಿಟ್ಟು ₹4.5 ಲಕ್ಷ ಸಾಲ ಪಡೆದಿರುವುದು ಅವರ ಆರ್ಥಿಕ ಸಂಕಷ್ಟವನ್ನು ಎತ್ತಿ ತೋರಿಸುತ್ತದೆ. ಆದರೂ ಸಾಲ ಮಾಡಿಯಾದರೂ ಜೀವನಾಂಶ ನೀಡುತ್ತಿರುವುದನ್ನು ಗಮನಿಸಿದರೆ, ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.

ಪತ್ನಿಯು ಉತ್ತಮ ಪ್ರಮಾಣದಲ್ಲಿ ವೇತನ ಪಡೆಯುತ್ತಿರುವಾಗ, ಪತಿಗೆ ಪೂರ್ವಿಕರ ಆಸ್ತಿ ಇದೆ ಎಂಬ ಕಾರಣ ನೀಡಿ ಜೀವನಾಂಶ ಹೆಚ್ಚಿಸಲು ಸಾಧ್ಯವಿಲ್ಲ” ಎಂದು ಹೇಳಿದ ನ್ಯಾಯಾಲಯ, ದಂಪತಿ ಸಲ್ಲಿಸಿದ್ದ ಎರಡೂ ಮರು ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

​ಪ್ರಕರಣದ ಹಿನ್ನೆಲೆ: ​ಮಂಜುನಾಥ ಮತ್ತು ಮಧುಮತಿ (ಹೆಸರು ಬದಲಿಸಲಾಗಿದೆ) 2009ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಪತ್ನಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ 2015ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪತ್ನಿಯ ಜೀವನ ನಿರ್ವಹಣೆಗೆ ₹4,000 ಹಾಗೂ ಮನೆ ಬಾಡಿಗೆಗಾಗಿ ₹5,000 ಸೇರಿದಂತೆ ಒಟ್ಟು ₹9,000 ಮಾಸಿಕ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶವನ್ನು ಕೆಳಹಂತದ ನ್ಯಾಯಾಲಯಗಳು ಎತ್ತಿ ಹಿಡಿದಿದ್ದವು.


Share It

You cannot copy content of this page