ಕುಂದಾಪುರ: ಹಠವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಕುಂದಾಪುರದ ಬಡ ಪ್ರತಿಭೆಯೊಬ್ಬರು ಸಾಬೀತುಪಡಿಸಿದ್ದಾರೆ. ಗುರುವಾರ ಪ್ರಕಟಗೊಂಡ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಸ್ ಕಂಡಕ್ಟರ್ ಪುತ್ರ ಪ್ರೀತಮ್ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕುಂದಾಪುರದ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿಯಾದ ಪ್ರೀತಮ್, ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದರು. ತಂದೆ ಖಾಸಗಿ ಬಸ್ ಕಂಡಕ್ಟರ್ ಆಗಿ ದುಡಿದು ಮಗನ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲದಿದ್ದರೂ, ಅದನ್ನೇ ಮೆಟ್ಟಿಲಾಗಿ ಮಾಡಿಕೊಂಡ ಪ್ರೀತಮ್, ಹೆಚ್ಚು ಪರಿಶ್ರಮದಿಂದ ಓದುತ್ತಿದ್ದರು.
ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸಾಧಕ:
ಈ ಬಾರಿ ರಾಜ್ಯದಾದ್ಯಂತ ಒಟ್ಟು ಏಳು ವಿದ್ಯಾರ್ಥಿಗಳು ಶೇ. 100ಕ್ಕೆ 100 ಅಂಕಗಳನ್ನು ಗಳಿಸಿದ್ದು, ಆ ಪೈಕಿ ಪ್ರೀತಮ್ ಕೂಡ ಒಬ್ಬರಾಗಿದ್ದಾರೆ. ಉಡುಪಿ ಜಿಲ್ಲೆಯು ಶೇ. 98.18ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದ್ದರೆ, ಪ್ರೀತಮ್ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.