ನವದೆಹಲಿ: ಚುನಾವಣೆಯ ದಿನದಂದು ಮತಗಟ್ಟೆಗೆ ತೆರಳದೆ ಮತದಾನದಿಂದ ದೂರ ಉಳಿಯುವ ಮತದಾರರ ವಿರುದ್ಧ ದಂಡ ವಿಧಿಸುವುದು ಅಥವಾ ಅವರನ್ನು ಬಂಧಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಮತದಾನ ಹಕ್ಕೇ ಹೊರತು ಬಲವಂತವಲ್ಲ
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಕುರಿತು ಸ್ಪಷ್ಟನೆ ನೀಡಿದ್ದು, “ಮತದಾನವು ಪ್ರಜಾಪ್ರಭುತ್ವದ ಒಂದು ಹಕ್ಕು. ಅದನ್ನು ಚಲಾಯಿಸಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ಮತದಾರನ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂಬ ನಿರೀಕ್ಷೆ ಇರುವುದು ಸಹಜ, ಆದರೆ ಅದನ್ನು ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟಿದೆ.
ಬಡವರು ಮತ್ತು ವಲಸೆ ಕಾರ್ಮಿಕರ ಹಿತರಕ್ಷಣೆ
ಚುನಾವಣಾ ದಿನದಂದು ಮತ ಚಲಾಯಿಸದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿ ಅಜಯ್ ಗೋಯೆಲ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಸಿಜೆಐ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಉದಾಹರಣೆ ನೀಡಿದರು. ತಮ್ಮ ದಿನನಿತ್ಯದ ಆದಾಯ ಕಳೆದುಕೊಂಡು ಮತ ಚಲಾಯಿಸಲು ತಮ್ಮ ರಾಜ್ಯಕ್ಕೆ ಹೋಗುವಂತೆ ಅವರನ್ನು ಬಲವಂತಗೊಳಿಸಬೇಕೇ ಎಂಬ ಪ್ರಶ್ನೆಯನ್ನು ಎತ್ತಿದರು. “ಅವರು ಹೋಗದಿದ್ದರೆ ಅವರನ್ನು ಬಂಧಿಸಬೇಕೇ?” ಎಂದು ಪ್ರಶ್ನಿಸಿದ ಅವರು, ಇಂತಹ ಕ್ರಮಗಳು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧ ಎಂದು ಹೇಳಿದರು.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಶಿಕ್ಷೆ ಅಥವಾ ದಂಡದ ಬದಲು ಜನರಲ್ಲಿ ಅರಿವು ಮೂಡಿಸುವುದು ಸರಿಯಾದ ದಾರಿ ಎಂದು ಪೀಠ ಹೇಳಿತು.
ಈ ಕುರಿತು ಅರ್ಜಿದಾರರು ಹೆಚ್ಚಿನ ಸಲಹೆ ಅಥವಾ ಅಹವಾಲುಗಳಿದ್ದಲ್ಲಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.