ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಆಟೋ ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್‌ಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 92 ಸಾವಿರ ರೂ. ದಂಡ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ.
ವಿಚಾರಣೆ ಹಂತದಲ್ಲಿದ್ದಾಗಲೇ ಆರೋಪಿ ಶಾರೀಕ್ ನ್ಯಾಯಾಲಯಕ್ಕೆ ತನ್ನ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದನು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತು. ಐಪಿಸಿ ಸೆಕ್ಷನ್ 120B, 121, 122, 307 ಸೇರಿದಂತೆ ಯುಎಪಿಎ ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಅಪರಾಧಿ ಶಾರೀಕ್ ಈಗಾಗಲೇ ಕಳೆದ ಮೂರೂವರೆ ವರ್ಷಗಳಿಂದ ಜೈಲಿನಲ್ಲಿದ್ದು, ಉಳಿದ ಆರೂವರೆ ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕಿದೆ.
ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಮತ್ತು 170 ಮಂದಿ ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಿ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಶಾರೀಕ್ ತಪ್ಪೋಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ ವಿರುದ್ಧದ ಆರೋಪಗಳ ಸಂಬಂಧ 33 ತನಿಖೆ ಮುಂದುವರೆಯಲಿದೆ.
ಪ್ರಕರಣದ ಹಿನ್ನೆಲೆ: 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಸ್ಫೋಟಕ ಸಾಗಿಸುತ್ತಿದ್ದ ಶಾರೀಕ್ ಗಂಭೀರವಾಗಿ ಗಾಯಗೊಂಡಿದ್ದರು. ತನಿಖೆಯ ವೇಳೆ ರಿಕ್ಷಾದಲ್ಲಿ ಪ್ರೆಷರ್ ಕುಕ್ಕರ್, ಡಿಟೋನೇಟರ್ ಮತ್ತು ಸರ್ಕಿಟ್‌ಗಳು ಪತ್ತೆಯಾಗಿದ್ದವು. ಇದು ಉಗ್ರ ಕೃತ್ಯವೆಂದು ಸಾಬೀತಾದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ಕೈಗೆತ್ತಿಕೊಂಡಿತ್ತು.
ತೀರ್ಥಹಳ್ಳಿ ಮೂಲದ ಶಾರೀಕ್ ಐಸಿಸ್ ಮತ್ತು ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಪ್ರೇಮ್‌ರಾಜ್ ಮತ್ತು ಅರುಣ್ ಕುಮಾರ್ ಎಂಬ ನಕಲಿ ಹೆಸರುಗಳಲ್ಲಿ ಓಡಾಡುತ್ತಿದ್ದು ಪ್ರಮುಖ ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಕದ್ರಿ, ತಮಿಳುನಾಡಿನ ವೇಲೂರಿನ ದೇವಾಲಯ,ಕನ್ಯಾಕುಮಾರಿ ಸೇರಿ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳನ್ನು ಅಪರಾಧಿ ಶಾರೀಕ್ ಟಾರ್ಗೆಟ್ ಮಾಡಿ ಸಂಚು ರೂಪಿಸಿದ್ದ ಎಂಬುದು ಎನ್ಐಎ ತನಿಖೆಯಿಂದ ತಿಳಿದು ಬಂದಿತ್ತು.