ಬೆಂಗಳೂರು: ಜನಗಣತಿಯು ಒಂದು ಮಹತ್ವದ ರಾಷ್ಟ್ರೀಯ ಕರ್ತವ್ಯವಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದು ಹೇಳಿರುವ ಹೈಕೋರ್ಟ್ ರಜೆಯ ಮೇಲೆ ತೆರಳಿರುವ ಶಿಕ್ಷಕರನ್ನು ಕೂಡಲೇ ವಾಪಸ್ ಕರೆಸಿಕೊಂಡು ಗಣತಿ ಕಾರ್ಯದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಖಾಸಗಿ ಶಾಲೆಯ ಪ್ರಾಂಶುಪಾಲರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಜೆ.ಪಿ. ನಗರದ 7ನೇ ಹಂತದಲ್ಲಿರುವ ‘ದಿ ಬ್ರಿಗೇಡ್ ಶಾಲೆಯ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಖ್ಯ ಜನಗಣತಿ ಅಧಿಕಾರಿಗಳು ಏಪ್ರಿಲ್ 9ರಂದು ಆದೇಶಿಸಿದ್ದರು. ಈ ಆದೇಶವನ್ನು ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಶಾಲೆಯ ಪ್ರಾಂಶುಪಾಲೆ ಶುರ್ಭಾ ಜೈನ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಶಾಲೆಯ 84 ಶಿಕ್ಷಕರನ್ನು ಗಣತಿಗೆ ನಿಯೋಜಿಸಬಹುದು. ಆದರೆ ಉಳಿದ ಶಿಕ್ಷಕರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ 12 ಶಿಕ್ಷಕರು ವರದಿ ಮಾಡಿಕೊಂಡಿದ್ದು, ಉಳಿದವರನ್ನು ತಕ್ಷಣ ಕರೆಸುವುದು ಕಷ್ಟಸಾಧ್ಯ. ಆದ್ದರಿಂದ ಅಧಿಕಾರಿಗಳ ಆದೇಶ ರದ್ದುಪಡಿಸಬೇಕು” ಎಂದು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, “ಪ್ರತಿ 10-11 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯದ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರೇ ಈ ರೀತಿ ವರ್ತಿಸಿದರೆ ಗಣತಿ ಕಾರ್ಯ ಪೂರ್ಣಗೊಳಿಸುವುದು ಹೇಗೆ?” ಎಂದು ಪ್ರಶ್ನಿಸಿತು.
ಶಾಲೆಯ ಮುಖ್ಯಸ್ಥರಾಗಿರುವ ಪ್ರಾಂಶುಪಾಲರು, ಮುಂದಿನ ಒಂದು ವಾರದೊಳಗೆ ರಜೆಯಲ್ಲಿರುವ ಶಿಕ್ಷಕರನ್ನು ವಾಪಸ್ ಕರೆಸಿ ಗಣತಿ ಆಯುಕ್ತರ ಮುಂದೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಬೇಕು.
ಶಿಕ್ಷಕರು ವರದಿ ಮಾಡಿಕೊಳ್ಳುವ ಷರತ್ತಿನ ಮೇರೆಗೆ, ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಸದ್ಯಕ್ಕೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.