ಸುದ್ದಿ

20 ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌: ರಾಮನಗರ CWC ಸದಸ್ಯ ಚಂದ್ರೇಗೌಡ ಅರೆಸ್ಟ್!

Share It

​ಬೆಂಗಳೂರು: 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ (CWC) ಸದಸ್ಯ ಚಂದ್ರೇಗೌಡ ಎಂಬಾತನನ್ನು ರಾಜರಾಜೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

​ಆರೋಪಿ ಚಂದ್ರೇಗೌಡ ಹಲವಾರು ರೀತಿಯಲ್ಲಿ ಮಹಿಳೆಯರನ್ನು ವಂಚಿಸುತ್ತ ಬಂದಿರುವುದು ಈಗ ಬಯಲಾಗಿದೆ. ಈತ ತನ್ನ ಬೇಳೆ ಬೇಯಿಸಿಕೊಳ್ಳಲು ನಕಲಿ ಐಡಿ ಕಾಡ್೯ಗಳನ್ನು ಸೃಷ್ಟಿಸಿಕೊಂಡು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಹಾಗೂ ಉಪನ್ಯಾಸಕ ಎಂದು ಹೇಳಿಕೊಂಡು ಮಹಿಳೆಯರನ್ನು ನಂಬಿಸುತ್ತಿದ್ದ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ಮದುವೆಯಾಗುವ ನಾಟಕವಾಡಿ, ನಕಲಿ ಅರಿಶಿನದ ಕೊಂಬು ಕಟ್ಟಿ ವಂಚಿಸಿದ್ದಾನೆ.

​ಸಂತ್ರಸ್ತ ಮಹಿಳೆಗೆ ಚಂದ್ರೇಗೌಡನ ನಡವಳಿಕೆಯ ಮೇಲೆ ಸಂಶಯ ಬಂದು ಆತನ ಮೊಬೈಲ್ ಪರಿಶೀಲಿಸಿದಾಗ ಆಘಾತಕಾರಿ ಸತ್ಯಗಳು ಹೊರಬಂದಿವೆ. ಮೊಬೈಲ್‌ನಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳಿದ್ದವು. ಇವುಗಳನ್ನು ಇಟ್ಟುಕೊಂಡು ಆತ ಮಹಿಳೆಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದೂರು ನೀಡಿದ ಮಹಿಳೆಯಿಂದಲೇ ಈತ ಹಂತಹಂತವಾಗಿ ಸುಮಾರು 5 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ.

​ಆರೋಪಿಯ ವಂಚನೆಯ ಜಾಲ ಎಷ್ಟು ಖತರ್ನಾಕ್ ಆಗಿತ್ತು ಎಂದರೆ ಸಂತ್ರಸ್ತೆಯ ಮಗಳ ಶಾಲಾ ದಾಖಲೆಗಳಲ್ಲಿ ತನ್ನ ಹೆಸರನ್ನೇ ‘ತಂದೆ’ ಎಂದು ಸೇರಿಸಲು ಯತ್ನಿಸಿದ್ದ.​ಬಾಡಿಗೆ ಮನೆಯ ಕರಾರು ಪತ್ರದಲ್ಲಿ ತಾನೇ ಸಂತ್ರಸ್ತೆಯ ಪತಿ ಎಂದು ಬಿಂಬಿಸಿಕೊಂಡಿದ್ದ.
​ತನ್ನ ತಾಯಿಯನ್ನು ಸಂತ್ರಸ್ತೆಯ ಮನೆಯಲ್ಲೇ ಬಿಟ್ಟು, ಆಕೆಯಿಂದಲೇ ವರ್ಷಗಟ್ಟಲೆ ಸೇವೆ ಮಾಡಿಸಿಕೊಂಡಿದ್ದ.
​ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

​ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ರಾಜರಾಜೇಶ್ವರಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಚಂದ್ರೇಗೌಡನನ್ನು ಬಂಧಿಸಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋಗಳ ಆಧಾರದ ಮೇಲೆ ಇನ್ನೂ ಎಷ್ಟು ಮಹಿಳೆಯರು ಈತನ ವಂಚನೆ ಜಾಲಕ್ಕೆ ಬಲಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.


Share It

You cannot copy content of this page