ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮ ಸಡಗರದ ನಡುವೆ ಅಳಿಯನನ್ನೇ ಸಂಚು ರೂಪಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಅತ್ತೆ ಮನೆಯವರು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರ ಹಿಂದೆ ಕೊಲೆ ಸಂಚು ಅಡಗಿತ್ತು ಎಂಬ ಕರಾಳ ಸತ್ಯ ತನಿಖೆಯಿಂದ ಬಯಲಾಗಿದೆ.
ಮೃತ ಯುವಕನನ್ನು ಶಿವಂ ಎಂದು ಗುರುತಿಸಲಾಗಿದೆ. ಆತನ ಪತ್ನಿಯ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಪತ್ನಿಯ ಕರೆಯ ಮೇರೆಗೆ ಶಿವಂ ಅತ್ತೆ ಮನೆಗೆ ತೆರಳಿದ್ದನು. ಮನೆಯಲ್ಲಿ ಎಲ್ಲರೂ ನಗುನಗುತ್ತಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗಲೇ ಶಿವಂಗೆ ಕುಡಿಯಲು ಪಾನೀಯವೊಂದನ್ನು ನೀಡಲಾಗಿತ್ತು. ಆದರೆ, ಆ ಪಾನೀಯದಲ್ಲಿ ಮೊದಲೇ ಪ್ರಾಣಾಪಾಯಕಾರಿ ವಿಷವನ್ನು ಬೆರೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾನೀಯ ಕುಡಿದ ಕೆಲವೇ ಕ್ಷಣಗಳಲ್ಲಿ ಶಿವಂ ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಆರೋಪಿಗಳಾದ ಪತ್ನಿ ಮತ್ತು ಮಾವ ಇದನ್ನು ‘ಸಹಜ ಸಾವು’ ಅಥವಾ ‘ಆಕಸ್ಮಿಕ ಘಟನೆ’ ಎಂದು ಬಿಂಬಿಸಲು ಹರಸಾಹಸ ಪಟ್ಟಿದ್ದರು. ಆದರೆ, ಶಿವಂ ಕುಟುಂಬದವರು ನೀಡಿದ ದೂರು ಮತ್ತು ಮರಣೋತ್ತರ ಪರೀಕ್ಷೆಯ ವರದಿಯು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಕೊಲೆಗೆ ಕಾರಣವೇನು?:
ಪ್ರಾಥಮಿಕ ತನಿಖೆಯ ಪ್ರಕಾರ, ಶಿವಂ ಮತ್ತು ಆತನ ಪತ್ನಿ ಪೂಜಾ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪೂಜಾ ತನ್ನ ತಂದೆಯ ಮನೆಯಲ್ಲೇ ನೆಲೆಸಿದ್ದಳು. ಪತಿಯೊಂದಿಗಿನ ವಿವಾದವನ್ನು ಶಾಶ್ವತವಾಗಿ ಕೊನೆಗಾಣಿಸಲು ಮತ್ತು ಆತನಿಂದ ಮುಕ್ತಿ ಪಡೆಯಲು ಪೂಜಾ ಮತ್ತು ಆಕೆಯ ತಂದೆ ರಾಕೇಶ್ ಸೇರಿ ಈ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಪೊಲೀಸರ ತೀವ್ರ ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಅಳಿಯನನ್ನು ಮನೆಗೆ ಕರೆಸಿಕೊಂಡು, ಪೂರ್ವ ನಿಯೋಜಿತ ಸಂಚಿನಂತೆ ವಿಷ ನೀಡಲಾಗಿದೆ ಎಂಬುದು ಸಾಬೀತಾಗಿದೆ. ಸದ್ಯ ಪೊಲೀಸರು ಹಂತಕ ಪತ್ನಿ ಪೂಜಾ ಮತ್ತು ಮಾವ ರಾಕೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.